ನಾನು ಗಾಡ್ ಫಾದರ್ ಇಲ್ಲದೆ ಬೆಳೆದಿದ್ದೇನೆ: ಯಡಿಯೂರಪ್ಪ

ಶನಿವಾರ, 31 ಮಾರ್ಚ್ 2012 (13:03 IST)
PR
'ನಾನು ಗಾಡ್ ಫಾದರ್ ಇಲ್ಲದೆ ಬೆಳೆದಿದ್ದೇನೆ. ಜನರ ಪ್ರೀತಿ-ವಿಶ್ವಾಸ ಗಳಿಸಿದ್ದೇನೆ. ಆದರೆ ನನ್ನ ಪಕ್ಷದವರೇ ನನ್ನ ಏಳಿಗೆಯನ್ನು ಸಹಿಸುತ್ತಿಲ್ಲ' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅಭಿನಂದಿಸುವ ನಮ್ಮಾಭಿಮಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಶನಿವಾರ ನಗರಕ್ಕೆ ಆಗಮಿಸಿದ ಅವರು ಸುದ್ದಿಗಾರರ ಜತೆ ಮಾತನಾಡುತ್ತ ಈ ರೀತಿ ಪ್ರತಿಕ್ರಿಯಿಸಿದರು.

ಯಡಿಯೂರಪ್ಪ ಹೆಮ್ಮರವಾಗಿ ಬೆಳೆಯುತ್ತಿದ್ದಾನೆ. ರಾಜ್ಯದ ಅಭಿವೃದ್ಧಿ ಕಡೆ ದಾಪುಗಾಲು ಹಾಕುತ್ತಿದ್ದಾನೆ. ಹಾಗಾಗಿ ಯಡಿಯೂರಪ್ಪ ಇದೇ ರೀತಿ ಬೆಳೆದರೆ ತಮಗೆ ಕಷ್ಟ ಎಂಬ ಭಯ ಪ್ರತಿಪಕ್ಷದವರದ್ದು. ಯಡಿಯೂರಪ್ಪ ಐದು ವರ್ಷ ಮುಖ್ಯಮಂತ್ರಿಯಾಗಿದ್ದರೆ ತಮಗೆ ಪ್ರತಿಪಕ್ಷ ಸ್ಥಾನ ಕಾಯಂ ಆಗಲಿದೆ ಎಂಬ ಆತಂಕದಿಂದ ಪ್ರತಿಪಕ್ಷದವರು ನಾನು ಸಿಎಂ ಆದಾಗಿನಿಂದ ನನ್ನ ಕಾಲೆಳೆಯುವ ಪ್ರಯತ್ನ ಮಾಡುತ್ತಲೇ ಬಂದಿದ್ದು, ಅದಕ್ಕೆ ನಮ್ಮ ಪಕ್ಷದವರು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಆದರೆ ನಾನು ಯಾವುದೇ ಗೊಂದಲಗಳಿಗೆ ಆಸ್ಪದ ಕೊಡಲ್ಲ. ಜನರ ಪ್ರೀತಿ ವಿಶ್ವಾಸವೇ ನನಗೆ ಶ್ರೀರಕ್ಷೆ. ನನ್ನ ವಿರುದ್ಧದ ಷಡ್ಯಂತ್ರ ನಡೆಸುತ್ತಿರುವುದು ನನಗೂ ಗೊತ್ತಿದೆ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳದೆ. ಪಕ್ಷವನ್ನು ಕಟ್ಟುವ ಕೆಲಸದಲ್ಲಿ ಮುಂದುವರಿಯುವುದಾಗಿ ಈ ಸಂದರ್ಭದಲ್ಲಿ ಹೇಳಿದರು.

ಬೃಹತ್ ಸಮಾವೇಶಕ್ಕೆ ಕ್ಷಣಗಣನೆ:
ಯಡಿಯೂರಪ್ಪ ಬಣ ತವರು ಜಿಲ್ಲೆಯಾದ ಶಿವಮೊಗ್ಗದಲ್ಲಿ ನಮ್ಮಾಭಿಮಾನ ಎಂಬ ಬೃಹತ್ ಸಮಾವೇಶಕ್ಕೆ ವೇದಿಕೆ ಸಿದ್ದ ಮಾಡಿದೆ. ಇಡೀ ಶಿವಮೊಗ್ಗದಾದ್ಯಂತ ಯಡಿಯೂರಪ್ಪ ಪರ ಬ್ಯಾನರ್, ಕಟೌಟ್ ರಾರಾಜಿಸುತ್ತಿದೆ. ಸಮಾವೇಶದಲ್ಲಿ ಸುಮಾರು 2 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಯಡಿಯೂರಪ್ಪ ಕೂಡ ಈಗಾಗಲೇ ನಗರಕ್ಕೆ ಆಗಮಿಸಿದ್ದು, ಮಧ್ಯಾಹ್ನ ಸಮಾವೇಶ ನಡೆಯಲಿದೆ.

ವೆಬ್ದುನಿಯಾವನ್ನು ಓದಿ