ನಿಧಿಯ ಆಸೆಗಾಗಿ ಮಹಿಳೆಯರಿಬ್ಬರ ಬಲಿ

ಗುರುವಾರ, 17 ಜನವರಿ 2008 (18:04 IST)
ನಿಧಿ ಸಿಗುತ್ತದೆಂಬ ಆಸೆಗಾಗಿ ಮಹಿಳೆಯರಿಬ್ಬರನ್ನು ಬಲಿಕೊಡುತ್ತಿದ್ದ ವಿಚಿತ್ರ ರೀತಿಯ ನರಹಂತಕರ ಜಾಲವೊಂದನ್ನು ಪತ್ತೆ ಹಚ್ಚುವಲ್ಲಿ ಕಲಾಸಿಪಾಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.ಈಜೀಪುರದ ಎಲಿಜಬೆತ್ ಹಾಗೂ ಬ್ಯಾಟರಾಯನಪುರದ ಅರುಣಾ ಎಂಬುವವರು ನರಹಂತಕರ ನಿಧಿಯ ಆಸೆಗಾಗಿ ಬಲಿಯಾಗಿದ್ದು, ಇವರನ್ನು ನದೀತೀರದಲ್ಲಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈಯಲಾಗಿದೆ ಎಂದು ತಿಳಿದು ಬಂದಿದೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ಮುಳಕಟ್ಟೆ ಗ್ರಾಮದ ಮೂಲದ ಹಾಗೂ ಪ್ರಸ್ತುತ ಬೆಂಗಳೂರಿನ ವಿಜಯನಗರದ ಜಿಕೆಡಬ್ಲ್ಯು ಲೇಔಟ್‌ನಲ್ಲಿ ರುವ ರವೀಂದ್ರ ಅಲಿಯಾಸ್ ರವಿ ಅಲಿಯಾಸ್ ಕಾಡು ಮನುಷ್ಯ ಅಲಿಯಾಸ್ ಅಜಯ್ ಎಂಬುವವನು ಈ ದುಷ್ಕ್ಕತ್ಯವನ್ನು ಎಸಗಿದ್ದಾನೆ. ಇವನ ಜೊತೆಯಲ್ಲಿ ದಾಸರಹಳ್ಳಿಯಲ್ಲಿದ್ದ ಮೋಹನ ಹಾಗೂ ಶೇಖರ ಅಲಿಯಾಸ್ ಶೇಕಿ ಹಾಗೂ ಅಗ್ರಹಾರ ದಾಸರಹಳ್ಳಿಯ ರವಿ ಕುಮಾರ್ ಅಲಿಯಾಸ್ ರವಿ ಆಲಿಯಾಸ್ ಆಟೋ ರವಿಮಂಜುನಾಥ್ ನಗರದ ಚಂದ್ರಶೇಖರ್ ಅಲಿಯಾಸ್ ಚಂದ್ರ ಎಂಬವವರನ್ನು ಬಂಧಿಸಲಾಗಿದೆ.

ಭೂಮಿಯಲ್ಲಿರುವ ನಿಧಿ ಸಿಗಬೇಕಾದರೆ ಮೂರು ಜನ ಮಹಿಳೆಯರನ್ನು ಬಲಿಕೊಡಬೇಕು. ಆಗ ಮಾತ್ರವೇ ನಿಧಿ ಇರುವ ಜಾಗ ಸುಲಭವಾಗಿ ಪತ್ತೆಯಾಗುತ್ತದೆಂದು ಹೇಳಿದ್ದ ಮಂತ್ರವಾದಿಯ ಮಾತಿಗೆ ನಂಬಿದ ನರಹಂತಕರು ಈ ಕೃತ್ಯವನ್ನು ಎಸಗಿದ್ದಾರೆ.

ಎಲಿಜಬೆತ್ ಸ್ನೇಹಿತಳಾದ ಅರುಣಳಿಗೆ ಕೌಟುಂಬಿಕ ಸಮಸ್ಯೆಗಳಿವೆ ಎಂಬುದನ್ನು ಒಂದು ತಿಂಗಳ ಹಿಂದೆಯೇ ಖಚಿತಪಡಿಸಿಕೊಂಡಿದ್ದ ದುಷ್ಕರ್ಮಿ ಶೇಖರ್, ಪೂಜೆ ಮಾಡಿದರೆ ತೊಂದರೆ ನಿವಾರಣೆಯಾಗುತ್ತದೆ ಎಂದು ಆಸೆ ಹುಟ್ಟಿಸಿ ಕಳೆದ ತಿಂಗಳು 25ರಂದು ವೈಷ್ಣವೀ ನದಿದಡಕ್ಕೆ ಕರೆದುಕೊಂಡು ಬಂದು, ಮೊದಲು ವಿಧವಾ ಪೂಜೆ ಮಾಡಬೇಕೆಂದು ತಿಳಿಸಿ ಅವರ ಮೇಲಿದ್ದ ಒಡವೆಗಳನ್ನು ಬದಿಗಿಟ್ಟು ನದಿ ತೀರದಲ್ಲಿ ಪೂಜೆ ಮಾಡುತ್ತಿದ್ದಾಗ ಕಲ್ಲು ಎತ್ತಿ ಇಬ್ಬರನ್ನು ಕೊಂದು ಹಾಕಿದ ಎಂದು ತಿಳಿದು ಬಂದಿದೆ. ಆರೋಪಿಗಳ ವಶದಿಂದ ಕೊಲೆಯಾದ ಎಲಿಜೆಬೆತ್ ಮತ್ತು ಅರುಣರವರ ಮೊಬೈಲ್ ಮತ್ತು ಚಿನ್ನಾಭರಣಗಳನ್ನು ವಶಪಡಿಸಕೊಳ್ಳಲಾಗಿದೆ.

ವೆಬ್ದುನಿಯಾವನ್ನು ಓದಿ