ನೋಡ ನೋಡುತ್ತಿದ್ದಂತೆಯೇ ಕುಸಿದುಬಿತ್ತು ಶಾಲಾ ಕಟ್ಟಡ. ಮೂರು ಸಾವು

ಮಂಗಳವಾರ, 26 ನವೆಂಬರ್ 2013 (11:37 IST)
PR
PR
ಕಳೆದ ಮೂರು ನಾಲ್ಕು ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಂಗಳೂರಿಗರು ನಲುಗಿ ಹೋಗಿದ್ದಾರೆ. ಮಳೆಯಿಂದಾಗಿ ಕಟ್ಟಡಗಳಲ್ಲಿ ಬಿರುಕು ಉಂಟಾದ ಪರಿಣಾಮ ಇಂದು ಬೆಳ್ಳಂ ಬೆಳಿಗ್ಗೆ ಶಾಲೆಯೊಂದು ಕುಸಿದುಬಿದ್ದಿದೆ. ಪರಿಣಾಮವಾಗಿ ಶಾಲೆಯೊಳಗಿದ್ದ ಮೂವರು ದಾರುಣವಾಗಿ ಸಾವಿಗೀಡಾಗಿದ್ದಾರೆ.

ಆಡುಗೋಡಿಯಲ್ಲಿ ಸಂಭವಿಸಿದ ಈ ಕಟ್ಟಡ ದುರಂತದಿಂದಾಗಿ ಸವಿತಾ ಎಂಬ 3 ವರ್ಷದ ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇಂದು ಮುಂಜಾನೆ 8.30 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ನೋಡ ನೋಡುತ್ತಿದ್ದಂತೆಯೇ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಳ್ಳತೊಡಗಿತು. ಇದರಿಂದ ಎಚ್ಚೆತ್ತ ಸ್ಥಳೀಯರು ಕಟ್ಟಡದೊಳಗಿದ್ದ ಜನರನ್ನು ರಕ್ಷಿಸಲು ಪ್ರಯತ್ನಿಸಿದ್ರು. ಆದ್ರೆ ಅಷ್ಟರಲ್ಲಾಗಲೇ ಎಲ್ಲರ ಕಣ್ಣೆದುರಲ್ಲೇ ಕಟ್ಟಡ ಕುಸಿದುಬಿತ್ತು. ನಗುತ್ತಿದ್ದ ಮಗು ಮತ್ತು ಇತರರು ಕಟ್ಟಡದ ಅವೇಶಷಗಳ ಅಡಿಯಲ್ಲಿ ಸಿಲುಕಿ ಸಾವಿಗೀಡಾಗಿದ್ರು.

ಪದ್ಮಾವತಿ ಶಾಲೆಗೆ ಸೇರಿದ ಕಟ್ಟಡ ಇದಾಗಿದ್ದು, ಮಳೆಗೆ ತೇವ ಹೆಚ್ಚಾಗಿ ಕಟ್ಟದಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ ಇಡೀ ಕಟ್ಟಡ ಕುಸಿದು ಬಿದ್ದಿದೆ ಎಂದು ಶಂಕಿಸಲಾಗಿದೆ. ಮೈಕೋ ಬಾಷ್ ಕಂಪನಿಯ ಪಕ್ಕದಲ್ಲೇ ಇರುವ ಪಾಳುಬಿದ್ದ ಈ ಕಟ್ಟಡದಲ್ಲಿ ಮೊದಲು ಶಾಲೆಯೊಂದನ್ನು ನಡೆಸಲಾಗುತ್ತಿತ್ತು. ಆದ್ರೆ ಇತ್ತೀಚೆಗೆ ಶಾಲೆಯನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಹೀಗಾಗಿ ಕೂಲಿ ಮಾಡುವ ಕುಟುಂಬವೊಂದು ಈ ಮನೆಯಲ್ಲಿ ವಾಸವಾಗಿತ್ತು. ಮನೆಯಲ್ಲಿ ಒಟ್ಟು 7 ಮಂದಿ ವಾಸವಾಗಿದ್ದು, ಇವರೆಲ್ಲರೂ ಉತ್ತರ ಪ್ರದೇಶ ಮೂಲದವರು ಎಂದು ತಿಳಿದುಬಂದಿದೆ.

ಇವರಲ್ಲಿ ಮೂವರು ಮಾತ್ರ ಸಾವಿಗೀಡಾಗಿದ್ದು, ಇಬ್ಬರನ್ನು ರಕ್ಷಿಸಲಾಗಿದೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಇನ್ನು ಇಬ್ಬರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಅವರನ್ನು ರಕ್ಷಿಸುವ ಕಾರ್ಯದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ನಿರತರಾಗಿದ್ದಾರೆ. ಆದ್ರೆ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಪದ್ಮ ಮತ್ತಿತರರು ಬದುಕಿರುವ ಶಂಕೆ ಕಡಿಮೆ ಎಂಬ ಮಾಹಿತಿ ಲಭ್ಯವಾಗುತ್ತಿದೆ. ಮೃತರ ಕುಟುಂಬಗಳಿಗೆ ಬಿಬಿಎಂಪಿ ವತಿಯಿಂದ 1 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.

ವೆಬ್ದುನಿಯಾವನ್ನು ಓದಿ