ಪಕ್ಷದ ಮುಖಂಡರನ್ನು ಹದ್ದುಬಸ್ತಿನಲ್ಲಿಡಿಃ ಗೌಡರ ಎಚ್ಚರಿಕೆ

ಗುರುವಾರ, 27 ಸೆಪ್ಟಂಬರ್ 2007 (18:33 IST)
ಬಿಜೆಪಿ ರಾಷ್ಟ್ತ್ರೀಯ ಮುಖಂಡರನ್ನು ಭೇಟಿ ಮಾಡಲೆಂದೇ ದೆಹಲಿಗೆ ತೆರಳಿ ಅವರನ್ನು ಭೇಟಿ ಮಾಡದೆ ಜೆಡಿಎಸ್ ವರಿಷ್ಠ ದೇವೇಗೌಡ ತುರ್ತು ಪತ್ರಿಕಾ ಗೋಷ್ಠಿ ಕರೆದು ಪಕ್ಷದ ಮುಖಂಡರನ್ನು ಹದ್ದುಬಸ್ತಿನಲ್ಲಿಡಿ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿರುವುದು ಗುರುವಾರದ ರಾಜಕೀಯ ಬೆಳವಣಿಗೆ.

ಬಳ್ಳಾರಿಯಲ್ಲಿ ಸಚಿವ ಶ್ರೀರಾಮುಲು ಮೇಲೆ ನಡೆದಿದೆ ಎನ್ನಲಾದ ಗುಂಡಿನದಾಳಿಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೈವಾಡವಿದೆ ಎಂಬ ಆರೋಪಕ್ಕೆ ಕೆಂಡಾಮಂಡಲವಾದ ದೇವೇಗೌಡರು ತಮ್ಮ ಪಕ್ಷದವರನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವವರೆಗೆ ಬಿಜೆಪಿ ನಾಯಕರೊಂದಿಗೆ ಮಾತುಕತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ವಾತಾವರಣವನ್ನು ತಿಳಿಪಡಿಸುವ ಜವಾಬ್ದಾರಿ ಬಿಜೆಪಿ ಮುಖಂಡರದ್ದೇ ಎಂದು ಚೆಂಡನ್ನು ಬಿಜೆಪಿ ಅಂಗಳಕ್ಕೆ ಎಸೆದಿದ್ದಾರೆ. ಒಬ್ಬ ಮುಖ್ಯಮಂತ್ರಿಯ ವಿರುದ್ಧ ಅವರ ಸಂಪುಟದ ಸಚಿವರೊಬ್ಬರು ಕೊಲೆ ಆಪಾದನೆ ಮಾಡುತ್ತಾರೆ ಎಂದರೆ ಸಹಿಸುವುದಾದರೂ ಹೇಗೆ? ಅದಕ್ಕೆ ತಾವು ಈ ಮಾಹಿತಿ ತಿಳಿದನಂತರ ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿ ಮಾಡದ ವಾಪಸ್ ಬಂದಿರುವುದಾಗಿ ತಿಳಿಸಿದ್ದಾರೆ.

ವಿಧಾನಪರಿಷತ್ ಸದಸ್ಯ ಜನಾರ್ಧನ ರೆಡ್ಡಿ, ಸಂಸದ ಕರುಣಾಕರ ರೆಡ್ಡಿ, ಸಚಿವ ಶ್ರೀರಾಮುಲು ಅವರನ್ನು ನಿಯಂತ್ರಿಸುವ ಜವಾಬ್ದಾರಿ ಬಿಜೆಪಿ ನಾಯಕರದ್ದು. ಇತ್ತೀಚಿಗೆ ಬಿಜೆಪಿ ಮುಖಂಡ ಸುರೇಶ್ ಕುಮಾರ್ ಸಹಾ ಜೆಡಿಎಸ್ ವಿರುದ್ಧ ನಿರಾಧಾರ ಆಪಾದನೆಗಳನ್ನು ಮಾಡಿದ್ದಾರೆ ಎಂದು ಕೆಂಡ ಕಾರಿದರು.

ವೆಬ್ದುನಿಯಾವನ್ನು ಓದಿ