ಪರಪ್ಪನ ಅಗ್ರಹಾರ ಜೈಲರ್ ಲಕ್ಷ್ಮೀನಾರಾಯಣ ವರ್ಗಾವಣೆಗೆ ತಡೆ

ಸೋಮವಾರ, 31 ಅಕ್ಟೋಬರ್ 2011 (13:22 IST)
ಘಟಾನುಘಟಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿಲ್ಲ ಎಂಬ ಅಸಮಾಧಾನದಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕ ಟಿ.ಎಸ್.ಲಕ್ಷ್ಮೀನಾರಾಯಣ ಅವರನ್ನು ಸರ್ಕಾರ ದಿಢೀರ್ ವರ್ಗಾಯಿಸಿರುವುದಕ್ಕೆ ಇದೀಗ ಕೆಎಟಿ (ಕರ್ನಾಟಕ ಆಡಳಿತ ನ್ಯಾಯಮಂಡಳಿ) ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್‌ನ ಅಧೀಕ್ಷಕರಾಗಿದ್ದ ಲಕ್ಷ್ಮೀನಾರಾಯಣ ಅವರನ್ನು ಸರ್ಕಾರ ಬಳ್ಳಾರಿ ಕಾರಾಗೃಹಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಪರಪ್ಪನ ಅಗ್ರಹಾರಕ್ಕೆ ಬಳ್ಳಾರಿ ಜೈಲು ಅಧೀಕ್ಷಕ ಲಿಂಗರಾಜು ಅವರನ್ನು ನೇಮಕ ಮಾಡಲಾಗಿತ್ತು.

ಆದರೆ ಇತ್ತೀಚೆಗಷ್ಟೇ ವರ್ಗಾವಣೆಯಾಗಿ ಪರಪ್ಪನ ಅಗ್ರಹಾರಕ್ಕೆ ಬಂದು ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಈ ರೀತಿ ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ ಲಕ್ಷ್ಮೀನಾರಾಯಣ ಅವರು ಕೆಎಟಿ ಮೊರೆ ಹೋಗಿದ್ದರು.

ಇಂದು ಅರ್ಜಿಯ ವಿಚಾರಣೆ ನಡೆಸಿದ ಕೆಎಟಿ, ಲಕ್ಷ್ಮೀನಾರಾಯಣ ಅವರ ವರ್ಗಾವಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಆ ನಿಟ್ಟಿನಲ್ಲಿ ಲಕ್ಷ್ಮೀನಾರಾಯಣ ಅವರು ಪರಪ್ಪನ ಅಗ್ರಹಾರ ಜೈಲು ಅಧೀಕ್ಷಕರಾಗಿ ಮುಂದುವರಿಯಲಿದ್ದಾರೆ.

ವಿಐಪಿ ಕೈದಿಗಳ ಮೂಗಿನ ನೇರಕ್ಕೆ ನಡೆದುಕೊಳ್ಳುತ್ತಿಲ್ಲ ಎಂಬುದನ್ನೇ ಕಾರಣವಾಗಿಟ್ಟುಕೊಂಡು ರಾಜ್ಯ ಸರ್ಕಾರ ಯಾವುದೇ ಕಪ್ಪು ಚುಕ್ಕಿ ಇಲ್ಲದ ಲಕ್ಷ್ಮೀನಾರಾಯಣ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಿತ್ತು.

ವೆಬ್ದುನಿಯಾವನ್ನು ಓದಿ