ಪಿರಿಯಾಪಟ್ಟಣದಲ್ಲಿ ಶಾಂತಿಯುತ ಮತದಾನ ಅಂತ್ಯ

ಮಂಗಳವಾರ, 28 ಮೇ 2013 (19:27 IST)
ಪಿರಿಯಾಪಟ್ಟಣದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣಾ ಮತದಾನ ಅಂತಿಮ ಹಂತ ತಲುಪಿದ್ದು, 6 ಗಂಟೆಯ ಸುಮಾರಿಗೆ ಕ್ಷೇತ್ರಾದ್ಯಂತ ಸುಮಾರು ಶೇ.67ರಷ್ಟು ಮತದಾನವಾಗಿದೆ.

ಇಂದು ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆಯಲ್ಲಿ ಸಾವಿರಾರು ಮತದಾರರು ಆಗಮಿಸಿ ಮತದಾನ ಮಾಡಿದ್ದಾರೆ. ಬೆಳಗ್ಗೆಯಿಂದಲೇ ಮತದಾನ ಚುರುಕಾಗಿತ್ತು. ಆದರೆ ಸಂಜೆ ವೇಳೆಗೆ ಸುರಿದ ಭಾರಿ ಮಳೆಯಿಂದಾಗಿ ಮತದಾನಕ್ಕೆ ಅಡ್ಡಿಯುಂಟಾಯಿತು. ಅಲ್ಲದೆ ಮತಗಟ್ಟೆಯೊಂದರಲ್ಲಿ ಮತದಾರರನ್ನು ಓಲೈಸುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು.

ಅಂತೆಯೇ ಮತಗಟ್ಟೆ ಸಂಖ್ಯೆ 172ರಲ್ಲಿ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮತದಾನ ಕೊಂಚ ವಿಳಂಬವಾಗಿ ಆರಂಭವಾಯಿತು. ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್‌ಗೆ ಮತ್ತು ಮುಖ್ಯಮಂತ್ರಿಯಾದ ಬಳಿಕ ಮೊದಲ ಚುನಾವಣೆ ಎದುರಿಸುತ್ತಿರುವ ಸಿದ್ದರಾಮಯ್ಯ ಅವರ ಪಾಲಿಗೆ ಪಿರಿಯಾಪಟ್ಟಣ ಚುನಾವಣೆ ಮಹತ್ವದ್ದಾಗಿದೆ. ಅಂತೆಯೇ ಪ್ರತಿಪಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಜೆಡಿಎಸ್ ಕೂಡ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಆದರೆ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲನ್ನು ಅನುಭವಿಸಿದ ಬಿಜೆಪಿ ಪಕ್ಷ ಮಾತ್ರ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ.

ಪಿರಿಯಾಪಟ್ಟಣ ಕ್ಷೇತ್ರದ ಚುನಾವಣೆ ನೇರವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವಿನ ಪೈಪೋಟಿಯಾಗಿದೆ. ಒಟ್ಟಾರೆಯಾಗಿ ಕೆಲವು ಅಹಿತಕರ ಘಟನೆಗಳನ್ನು ಹೊರತು ಪಡಿಸಿದರೆ ಇಂದು ನಡೆದ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣಾ ಮತದಾನ ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿತ್ತು.

ವೆಬ್ದುನಿಯಾವನ್ನು ಓದಿ