ಪೊಲೀಸ್ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸಿ ಕೋಟಿ ಕೋಟಿ ಲಪಟಾಯಿಸಿದ ಗನ್‌ಮ್ಯಾನ್ ಬಂಧನ

ಬುಧವಾರ, 26 ಮಾರ್ಚ್ 2014 (20:29 IST)
PTI
ಕೇರಳದ ಖಾಸಗಿ ಬಸ್‌ನಲ್ಲಿ ವಶಪಡಿಸಿಕೊಂಡ ದಾಖಲೆರಹಿತ ಹಣದಲ್ಲಿ 2.05 ಕೋಟಿ ರೂ. ಮರೆಮಾಚಿದ ಪ್ರಕರಣ  ಹೊಸ ತಿರುವು ಪಡೆದುಕೊಂಡಿದ್ದು, ದಕ್ಷಿಣ ವಲಯ ಐಜಿಪಿ ಗನ್‌ಮ್ಯಾನ್‌ ಪ್ರಕಾಶ್‌ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್‌ ಇಲಾಖೆಯ ಉನ್ನತ ಅಧಿಕಾರಿಯ ಗನ್‌ಮ್ಯಾನ್‌ ಬಂಧಿತರಾಗಿರುವುದು ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಪ್ರಕಾಶ್‌ ಅವರನ್ನು ನಗರದ ಎರಡನೇ ಜೆಎಂಎಫ್‌ ನ್ಯಾಯಾಲಯದ ನ್ಯಾಯಾಧೀಶರ ಎದುರು ಸಿಐಡಿ ಪೊಲೀಸರು ಭದ್ರತೆಯೊಂದಿಗೆ ಕರೆತಂದು ಹಾಜರುಪಡಿಸಿದರು. ಸಿಐಡಿ ಪೊಲೀಸರ ಕೋರಿಕೆ ಮೇರೆಗೆ ನ್ಯಾಯಾಧೀಶರು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ನಾಲ್ಕು ದಿನಗಳವರೆಗೆ ಸಿಐಡಿ ಪೊಲೀಸ್‌ ವಶಕ್ಕೆ ಒಪ್ಪಿಸಿದರು.

ಮೂಲತಃ ತುಮಕೂರು ಜಿಲ್ಲೆಯ ಮಾಯಸಂದ್ರದ ಪ್ರಕಾಶ್‌, ಮೈಸೂರು ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್‌)ನಲ್ಲಿ ಕಾನ್‌ಸ್ಟೇಬಲ್‌ ಆಗಿದ್ದು, ಜ್ಯೋತಿನಗರದ ಪೊಲೀಸ್‌ ವಸತಿಗೃಹದಲ್ಲಿ ವಾಸವಿದ್ದರು. 12 ವರ್ಷಗಳಿಂದ ಐಜಿಪಿ ಗನ್‌ಮ್ಯಾನ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮಾರ್ಚ್‌ 10ರಂದು ಬಂಧಿಸಲಾಗಿದ್ದ, ಬಾತ್ಮೀದಾರರಾದ ಸಲೀಂ, ಷರೀಫ್‌ ಮತ್ತು ಮುಸ್ತಾಕ್‌ ಎಂಬುವವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಸಿಐಡಿ ಪೊಲೀಸರ ವಶಕ್ಕೆ ನೀಡಲಾಗಿತ್ತು. ಸೋಮವಾರ ಸಹ ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜ. 4ರಂದು ರಾತ್ರಿ ಬೆಂಗಳೂರಿನಿಂದ ಕೇರಳದ ಕಲ್ಲಿಕೋಟೆಗೆ ಹೋಗುತ್ತಿದ್ದ ಖಾಸಗಿ ಬಸ್‌ ತಡೆದು, ಅದರಲ್ಲಿದ್ದ 2.05 ಕೋಟಿ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿತ್ತು.

ದಾಖಲೆ ಇಲ್ಲದ 20 ಲಕ್ಷ ರೂ. ನಗದು ಖಾಸಗಿ ಬಸ್‌ನಲ್ಲಿ ಸಿಕ್ಕಿತ್ತು ಎಂದು ಇಲವಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಉಳಿದ ಹಣವನ್ನು ಮಾಹಿತಿ ನೀಡಿದ ಬಾತ್ಮೀದಾರರಿಗೆ ಮತ್ತು ಇನ್ನುಳಿದ ಹಣವನ್ನು ಯಾರ್‌ ಯಾರಿಗೆ ಎಷ್ಟು ಹಂಚಲಾಗಿದೆ ಎಂಬುದರ ಕುರಿತು ಬಾತ್ಮೀದಾರರು ಸಿಐಡಿ ಪೊಲೀಸರ ಎದುರು ಬಹಿರಂಗಪಡಿಸಿದ್ದರು ಎನ್ನಲಾಗಿದೆ.ಬಾತ್ಮೀದಾರರು ನೀಡಿದ ಮಾಹಿತಿ ಆಧಾರದ ಮೇರೆಗೆ ಸಿಐಡಿ ಪೊಲೀಸರು ಪ್ರಕಾಶ್‌ ಅವರನ್ನು ಬಂಧಿಸಿದ್ದಾರೆ.

ಇನ್ನೂ ಪತ್ತೆಯಾಗಿಲ್ಲ: ವಶಪಡಿಸಿಕೊಂಡಿದ್ದ ಹಣಕ್ಕಿಂತ ಕಡಿಮೆ ಮೊತ್ತ ತೋರಿಸಿದ್ದ ಎಸ್ಐ ಜಗದೀಶ್, ಕಾನ್‌ಸ್ಟೆಬಲ್‌ಗಳಾದ ಅಶೋಕ್, ಸತೀಶ್, ಲತೀಫ್, ರವಿ ಮತ್ತು ಮನೋಹರ್ ಎಂಬುವರು ಇನ್ನೂ ತಲೆಮರೆಸಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇವರ ಪಾತ್ರ ಇರುವುದು ಖಚಿತವಾದ ಹಿನ್ನೆಲೆಯಲ್ಲಿ ಮೈಸೂರು ಎಸ್ಪಿ ಅಭಿನವ್ ಖರೆ ಅವರು 6 ಮಂದಿಯನ್ನು ಅಮಾನತುಗೊಳಿಸಿದ್ದಾರೆ. ಈ ಆರೋಪಿಗಳ ಬಂಧನಕ್ಕಾಗಿ ಶೋಧ ಮುಂದುವರಿದಿದೆ.

ವೆಬ್ದುನಿಯಾವನ್ನು ಓದಿ