ಬಳ್ಳಾರಿ-ಸೋಮಶೇಖರ ರೆಡ್ಡಿಯಿಂದ ಕೊಲೆ ಬೆದರಿಕೆ; ಆರೋಪ

ಬುಧವಾರ, 30 ನವೆಂಬರ್ 2011 (15:37 IST)
PR
ಪಕ್ಷೇತರ ಅಭ್ಯರ್ಥಿ ಶ್ರೀರಾಮುಲು ವಿರುದ್ಧ ಪ್ರಚಾರ ಮಾಡಿದರೆ ಕೊಲೆ ಮಾಡುವುದಾಗಿ ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಬೆದರಿಕೆ ಹಾಕಿರುವುದಾಗಿ ಬುಡಾ ಅಧ್ಯಕ್ಷ ವಿನೋದ್ ಗಂಭೀರವಾಗಿ ಆರೋಪಿಸಿದ್ದಾರೆ.

ನಾನು ಕಳೆದ ಇಪ್ಪತ್ತು ವರ್ಷದಿಂದ ಬಿಜೆಪಿ ಪಕ್ಷದಲ್ಲಿದ್ದೇನೆ. ನಮಗೆ ಬಿಜೆಪಿ ಪಕ್ಷ ಮುಖ್ಯ. ಹಾಗಾಗಿ ನಾನು ಬಿಜೆಪಿ ಅಭ್ಯರ್ಥಿ ಗಾದಿ ಲಿಂಗಪ್ಪ ಅವರನ್ನು ಬೆಂಬಲಿಸಿದ್ದೇನೆ ಎಂದು ವಿನೋದ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.

ಏತನ್ಮಧ್ಯೆ ಮಂಗಳವಾರ ರಾತ್ರಿ ಕಾರಿನಲ್ಲಿ ಆಗಮಿಸಿದ್ದ ಸೋಮಶೇಖರ ರೆಡ್ಡಿಯವರು ನನ್ನ ಕರೆದು, ಏಯ್ ನೀನು ಶ್ರೀರಾಮುಲು ವಿರುದ್ಧ ಪ್ರಚಾರ ಮಾಡುತ್ತೀಯಾ? ನಿನ್ನ ನೋಡಿಕೊಳ್ಳುವುದಾಗಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬುದು ವಿನೋದ್ ಆರೋಪ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿಗೆ ದೂರು ನೀಡುವುದಾಗಿ ಹೇಳಿದ್ದಾರೆ.

ನನಗೆ ವೈಯಕ್ತಿಕವಾಗಿ ಸೋಮಶೇಖರ ರೆಡ್ಡಿಯವರ ಮೇಲೆ ಅಭಿಮಾನ, ಗೌರವವಿದೆ. ನನಗೆ ಬಿಜೆಪಿ ಪಕ್ಷ ಮುಖ್ಯ. ಆ ಪಕ್ಷದ ಚಿಹ್ನೆಯಡಿ ಯಾರೇ ಸ್ಪರ್ಧಿಸಿದರೂ ನಾವು ಬೆಂಬಲಿಸುತ್ತೇವೆ. ಈ ಹಿಂದೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಶ್ರೀರಾಮುಲು, ರೆಡ್ಡಿ ಸಹೋದರರ ಪರ ಕೆಲಸ ಮಾಡಿದ್ದೇವೆ. ಈ ಬಾರಿ ಶ್ರೀರಾಮುಲು ಬಿಜೆಪಿ ತೊರೆದಿದ್ದಾರೆ. ಆ ನಿಟ್ಟಿನಲ್ಲಿ ಅವರನ್ನು ಬೆಂಬಲಿಸಿಲ್ಲ ಎಂಬ ವಾದ ವಿನೋದ್ ಅವರದ್ದು.

ವಿನೋದ್ ಆರೋಪದಲ್ಲಿ ಹುರುಳಿಲ್ಲ: ಸೋಮಶೇಖರ ರೆಡ್ಡಿ
ನಾನು ಕೊಲೆ ಬೆದರಿಕೆ ಒಡ್ಡಿದ್ದೇನೆ ಎಂಬ ಬುಡಾ ಅಧ್ಯಕ್ಷ ವಿನೋದ್ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂದು ಶಾಸಕ ಸೋಮಶೇಖರ ರೆಡ್ಡಿ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆಯಲ್ಲಿ ಶ್ರೀರಾಮುಲು ಗೆಲುವು ಖಚಿತ ಎಂದು ಅರಿತು ಹತಾಶೆಗೊಂಡಿರುವ ವಿನೋದ್ ಈ ರೀತಿ ಹೇಳಿಕೆ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ನಾನು ರಾತ್ರಿ ವಿನೋದ್ ಜತೆ ಬಿಜೆಪಿ ಕಚೇರಿಯಲ್ಲಿ ಗುಂಡಿನ ಹಾರಾಟ ನಡೆದ ಪ್ರಕರಣದ ಬಗ್ಗೆ ವಿಚಾರಿಸಿದ್ದೆ ಅಷ್ಟೇ. ವಿಪರ್ಯಾಸ ಎಂದರೆ ಇದೀಗ ನಾನು ಕೊಲೆ ಬೆದರಿಕೆ ಹಾಕಿರುವುದಾಗಿ ಪ್ರಕರಣ ತಿರುಚುವ ಯತ್ನ ನಡೆಸುತ್ತಿದ್ದಾರೆ ಎಂದು ದೂರಿದರು.

ವೆಬ್ದುನಿಯಾವನ್ನು ಓದಿ