ಬಸ್‌ ಪ್ರಯಾಣ ದರ ಹೆಚ್ಚಳಕ್ಕೆ ನಾನಾ ಕಾರಣ

ಭಾನುವಾರ, 16 ಜೂನ್ 2013 (11:43 IST)
PR
PR
ಸಗಟು ಡೀಸೆಲ್‌ ಖರೀದಿಯನ್ನು ಪ್ರತಿ ಲೀ.ಗೆ 12 ಪೈಸೆ ಹೆಚ್ಚಿಸಿದ್ದರಿಂದ ಪ್ರತಿ ಲೀ.ಗೆ ಸಗಟು ಖರೀದಿದಾರರಿಗೆ 11.95 ರೂ. ಹೆಚ್ಚಳವಾಗಿದೆ. ಈ ಡೀಸೆಲ್‌ ದರ ಪರಿಷ್ಕರಣೆಯಿಂದ ನಿಗಮಕ್ಕೆ ವಾರ್ಷಿಕ 120.10 ಕೋಟಿ ರೂ. ಹೊರೆಯಾಗುತ್ತಿದೆ. ಇದಲ್ಲದೆ, ಸರ್ಕಾರ ನಿಗದಿಪಡಿಸಿರುವಂತೆ ನೌಕರರ ತುಟ್ಟಿಭತ್ಯೆ ಪರಿಷ್ಕರಣೆ ಮಾಡಲಾಗಿದ್ದು, ಇದರಿಂದ ಕಾರ್ಯಾಚರಣೆ ವೆಚ್ಚದಲ್ಲಿ ವರ್ಷಕ್ಕೆ 102.58 ಕೋಟಿ ರೂ. ಹೊರೆಯಾಗುತ್ತಿದೆ.

ಒಟ್ಟಾರೆ 222.68 ಕೋಟಿ ರೂ. ಹೊರೆಯಾಗಿದೆ. ಇದರ ಜತೆಗೆ ವಿದ್ಯಾರ್ಥಿಗಳ ಬಸ್‌ ಪಾಸ್‌ನ ಪ್ರಯಾಣ ಮಿತಿಯನ್ನು 50ರಿಂದ 60 ಕಿ.ಮೀ.ಗೆ ಹೆಚ್ಚಿಸಲಾಗಿದೆ. ಪರಿಣಾಮ 30 ಕೋಟಿ ರೂ. ನಿಗಮಕ್ಕೆ ಭಾರವಾಗಿದೆ. ಈ ಹೊರೆ ತಗ್ಗಿಸಲು ಎಲ್ಲ ನಾಲ್ಕೂ ನಿಗಮಗಳಲ್ಲಿ ಸರಾಸರಿ ಶೇ. 10.50ರಷ್ಟು ಪ್ರಯಾಣ ದರವನ್ನು ಹೆಚ್ಚಿಸಿ ಸರ್ಕಾರ ಆದೇಶಿಸಿದೆ.

ಈ ಪರಿಷ್ಕರಣೆಯಿಂದ ಒಂಬತ್ತು ತಿಂಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಪ್ರಯಾಣ ದರ ಸತತ ಎರಡನೇ ಬಾರಿಗೆ ಹೆಚ್ಚಳ ಆದಂತಾಗಿದೆ. ಈ ಹಿಂದೆ ಕೆಎಸ್‌ಆರ್‌ಟಿಸಿಯು ಸೆಪ್ಟೆಂಬರ್‌ನಲ್ಲಿ ಸರಾಸರಿ ಶೇ. 12ರಷ್ಟು ಪ್ರಯಾಣ ದರ ಹೆಚ್ಚಳ ಮಾಡಿತ್ತು. ಆಗಲೂ ನೌಕರರ ತುಟ್ಟಿಭತ್ಯೆ ಹಾಗೂ ವಿದ್ಯಾರ್ಥಿಗಳ ರಿಯಾಯ್ತಿ ಪಾಸ್‌ನ ಪ್ರಯಾಣ ಮಿತಿ ಹೆಚ್ಚಳದ ಕಾರಣ ನೀಡಿದ್ದನ್ನೂ ಇಲ್ಲಿ ಸ್ಮರಿಸಬಹುದು.

ಇಷ್ಟೊಂದು ಪ್ರಮಾಣ ದರ ಏರಿಕೆಯಿಂದ ಸರ್ಕಾರಕ್ಕೆ ವಾರ್ಷಿಕ 186.72 ಕೋಟಿ ರೂ. ಆದಾಯ ಸಂಗ್ರಹವಾಗಲಿದೆ. ಆದರೂ ಇನ್ನೂ 35.96 ಕೋಟಿ ರೂ. ಆದಾಯ ಕೊರತೆ ಉಂಟಾಗಲಿದೆ ಎಂಬ ವಾದ ಮಂಡಿಸಿದೆ. ಈ ಕೊರತೆಯನ್ನು ಮುಂದಿನ ದಿನಗಳಲ್ಲಿ ಕಾರ್ಯಾಚರಣೆಯನ್ನು ಉತ್ತಮಗೊಳಿಸಿ, ಸರಿಪಡಿಸುವ ವಿಶ್ವಾಸವನ್ನೂ ನಿಗಮ ವ್ಯಕ್ತಪಡಿಸಿದೆ.

ಈ ಹಿಂದೆಯೇ ಅಂದರೆ ಸಗಟು ಡೀಸೆಲ್‌ ಖರೀದಿ ದರ ಏರಿಕೆಯಾದ ಬೆನ್ನಲ್ಲೇ ಪ್ರಯಾಣ ದರ ಹೆಚ್ಚಿಸುವಂತೆ ಕೆಎಸ್‌ಆರ್‌ಟಿಸಿ ಸರ್ಕಾರದ ಮುಂದೆ ಮನವಿ ಮಾಡಿಕೊಂಡಿತ್ತು. ಆದರೆ, ಚುನಾವಣೆ ಹೊಸ್ತಿಲಲ್ಲಿದ್ದುದರಿಂದ ಈ ಪ್ರಸ್ತಾವವನ್ನು ಅಂದಿನ ಬಿಜೆಪಿ ಸರ್ಕಾರ ಸಾರಾಸಗಟಾಗಿ ತಳ್ಳಿಹಾಕಿತ್ತು. ನೂತನ ಸರ್ಕಾರ ಬಂದ ನಂತರವೂ ನಿಗಮ ಮತ್ತೂಮ್ಮೆ ಅಹವಾಲು ಸಲ್ಲಿಸಿತು. ಕೆಎಸ್‌ಆರ್‌ಟಿಸಿ ಚೇತರಿಸಿಕೊಳ್ಳಲು ಕೊನೆಪಕ್ಷ ಸರ್ಕಾರದಿಂದ ಸಬ್ಸಿಡಿಯಾದರೂ ನೀಡಬೇಕು ಎಂದು ಅಲವತ್ತುಕೊಂಡಿತ್ತು. ಅಂತಿಮವಾಗಿ ಸರ್ಕಾರ ನಿಗಮದ ಮೊರೆಗೆ ಅಂಕಿತ ಮುದ್ರೆ ಒತ್ತಿದೆ.

ವೆಬ್ದುನಿಯಾವನ್ನು ಓದಿ