ಬಿಎಸ್ಆರ್‌ನಲ್ಲಿ ಉಸಿರುಗಟ್ಟಿದ್ದ ಕಾರಣ ಜೆಡಿಎಸ್‌ಗೆ ರಕ್ಷಿತಾ

ಮಂಗಳವಾರ, 16 ಏಪ್ರಿಲ್ 2013 (14:11 IST)
PR
PR
ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ನಟಿ ರಕ್ಷಿತಾ ಚುನಾವಣಾ ಕಣದಿಂದ ಹಿಂದೆ ಸರಿದಿರುವರಲ್ಲದೆ ಬಿಎಸ್ಆರ್‌ನಲ್ಲಿ ಉಸಿರುಗಟ್ಟುವ ವಾತಾವರಣವಿದ್ದ ಕಾರಣ ಬಿಎಸ್ಆರ್ ಕಾಂಗ್ರೆಸ್ ತೊರೆದು ಮಾಜಿ ಪ್ರಧಾನಿ ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.

ಚಾಮರಾಜನಗರದಲ್ಲಿ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ರಕ್ಷಿತಾರಿಗೆ ನಾಮಪತ್ರ ಸಲ್ಲಿಕೆಗೂ ಮುನ್ನವೇ ಸ್ಥಳೀಯ ನಾಯಕರು ವಿರೋಧ ವ್ಯಕ್ತಪಡಿಸಿ ಅಸಹಕಾರ ಧೋರಣೆ ತೋರಿದ್ದರು. ಬಿಎಸ್ಆರ್ ನಾಯಕರು ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ ಎಂದು ಬೇಸರಗೊಂಡಿದ್ದ ರಕ್ಷಿತಾ ಮತ್ತೊಬ್ಬ ನಟಿ ಪೂಜಾ ಗಾಂಧಿ ಕೆಜೆಪಿ ತೊರೆದು ಬಿಎಸ್ಆರ್ ಸೇರ್ಪಡೆಗೊಳ್ಳಲು ಬಂದಾಗಲೂ ತಮಗೆ ಒಂದು ಮಾತೂ ಹೇಳಿಲ್ಲ ಎಂದು ಸಿಟ್ಟಾಗಿದ್ದರು.

ಈ ಎಲ್ಲಾ ಹಿನ್ನೆಲೆಯಲ್ಲಿ ಪಕ್ಷದ ಚಟುವಟಿಕೆಗಳಿಂದ ದೂರವಿದ್ದ ರಕ್ಷಿತಾ, ಸೋಮವಾರ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದರಲ್ಲದೆ ಅವರಿಂದ ಪಕ್ಷ ಸೇರ್ಪಡೆಗೆ ಗ್ರೀನ್ ಸಿಗ್ನಲ್ ಸಿಕ್ಕ ಬಳಿಕ ದೇವೇಗೌಡರ ನಿವಾಸದಲ್ಲಿ ವಿದ್ಯುಕ್ತವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ನಟಿ ರಕ್ಷಿತಾ, ಶ್ರೀರಾಮುಲು ಬಗ್ಗೆ ತನಗೆ ಅಪಾರ ಗೌರವವಿದೆ. ಆದರೆ, ಅವರಿಗೆ ಮಾರ್ಗದರ್ಶಕರು ಸರಿಯಾಗಿಲ್ಲ. ಬಿಎಸ್ಆರ್ ಕಾಂಗ್ರೆಸ್ ಪಕ್ಷದಲ್ಲಿ ಉಸಿರುಗಟ್ಟಿಸುವ ವಾತಾವರಣದಲ್ಲಿ ತಾನಿದ್ದೆ. ಜೆಡಿಎಸ್ ಸೇರ್ಪಡೆಯಿಂದ ಸ್ವಂತ ಮನೆಗೆ ಬಂದ ನೆಮ್ಮದಿ ಇದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ