ಬಿಜೆಪಿಗೆ ಎಂಇಎಸ್ ತಂದ ತಲೆ ನೋವು

ಬುಧವಾರ, 7 ಮೇ 2008 (10:36 IST)
ಜಿಲ್ಲೆಯ ವ್ಯಾಪ್ತಿಯ ವಿಧಾನ ಸಭಾ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಮರಾಠಿ ಮೂಲದ ಅಭ್ಯರ್ಥಿಗಳಿಗೆ ತನ್ನ ಬೆಂಬಲ ಎಂದು ಮರಾಠಿ ಎಕೀಕರಣ ಸಮಿತಿ ಮತ್ತು ಅಖಿಲ ಭಾರತೀಯ ಚಾವಾ ಮರಾಠಾ ಯುವ ಸಂಘಟನೆ ತೀರ್ಮಾನಿಸಿರುವ ಕಾರಣ ಬೀದರ್‌ನಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಠಿಣವಾಗುವ ಸಾಧ್ಯತೆ ಇದೆ.

ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ಸಮುದಾಯದ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಭಾರತೀಯ ಜನತಾ ಪಕ್ಷವು ಅವಕಾಶ ಮಾಡಿಕೊಟ್ಟಿಲ್ಲದ ಕಾರಣ ಜಿಲ್ಲೆಯ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪರ ಪ್ರಚಾರ ಮಾಡುವುದಿಲ್ಲ ಎಂದು ಮರಾಠಾ ಯುವ ಸಂಘಟನೆ ಹೇಳಿದೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿಯ ಜಿಲ್ಲಾ ಜಂಟಿ ಕಾರ್ಯದರ್ಶಿ ಶಿವಾಜಿ ಪಾಟೀಲ್ ಅವರು ಸಮಿತಿಯ ಸದಸ್ಯರು ಸಭೆ ಮರಾಠಿ ಮೂಲದ ಅಭ್ಯರ್ಥಿಗಳಿಗೆ ಬೆಂಬಲ ನೀಡುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು. ಯಾವುದೇ ಪಕ್ಷದಿಂದ ಮರಾಠಿ ಮೂಲದ ಅಭ್ಯರ್ಥಿ ಚುನಾವಣೆಗೆ ಸ್ಪರ್ಧಿಸಿದ್ದರೆ ಅವರಿಗೆ ತಮ್ಮ ಸಂಘಟನೆಗಳ ಬೆಂಬಲ ಇದೆ ಎಂದು ಈ ಸಂದರ್ಭದಲ್ಲಿ ಅವರು ಸ್ಪಷ್ಟಪಡಿಸಿದರು.

ಕಳೆದ ಬಾರಿಯ (2004)ರ ವಿಧಾನ ಸಭೆಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳಾದ ಪ್ರಕಾಶ್ ಖಂಡ್ರೆ ಮತ್ತು ರಾಜೇಂದ್ರ ವರ್ಮಾ ಅವರಿಗೆ ಚಾವಾ ಸಂಘಟನೆ ಬೆಂಬಲ ನೀಡಿದ ಪರಿಣಾಮವಾಗಿ ಬಾಲ್ಕಿ ಮತ್ತು ಹುಳಸೂರು ವಿಧಾನ ಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದರು. ಈ ಬಾರಿ ಜಿಲ್ಲೆಯ ಎರಡು ಪ್ರಮುಖ ಮರಾಠಿ ಸಂಘಟನೆಗಳು ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡುವುದಕ್ಕೆ ನಿರಾಕರಿಸುವುದರಿಂದ ಆ ಪಕ್ಷದ ಅಭ್ಯರ್ಥಿಗಳ ಆಯ್ಕೆ ಕಠಿಣವಾಗುವ ಲಕ್ಷಣಗಳು ಕಾಣುತ್ತಿವೆ.

ಬಾಲ್ಕಿ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಅನಿಲ್ ಬುಸಾರಿ (ಜೆಡಿಎಸ್) ಮತ್ತು ಯಾದವರಾವ್ ಕಾನ್ಸೆ (ಬಿಎಸ್‌ಪಿ) ಮರಾಠಿ ಮೂಲದ ಅಭ್ಯರ್ಥಿಗಳಾಗಿದ್ದು ಇವರ ಪೈಕಿ ಬೆಂಬಲ ಯಾರಿಗೆ ಬೆಂಬಲ ನೀಡಬೇಕು ಎನ್ನುವ ಕುರಿತು ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಬಸವಕಲ್ಯಾಣ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮರಾಠಾ ಸಮುದಾಯದ ನಾಯಕ ಮಾರುತಿ ಮುಳೆ ಅವರಿಗೆ ಬೆಂಬಲ ನೀಡಲು ಎರಡೂ ಸಂಘಟನೆಗಳು ಈಗಾಗಲೇ ತೀರ್ಮಾನ ತೆಗೆದುಕೊಂಡಿವೆ.

ವೆಬ್ದುನಿಯಾವನ್ನು ಓದಿ