ಬಿಜೆಪಿಯಿಂದ ಮತದಾರರ ಒಲೈಕೆ: ಕಾಂಗ್ರೆಸ್ ಆರೋಪ

ಬುಧವಾರ, 26 ನವೆಂಬರ್ 2008 (18:29 IST)
ಏಳು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸರಕಾರ ಅಭಿವೃದ್ಧಿ ನೆಪದಲ್ಲಿ ಹಣ ಬಿಡುಗಡೆ ಮಾಡಿ ಮತದಾರರನ್ನು ಒಲೈಸಿಕೊಳ್ಳುವ ಹುನ್ನಾರ ನಡೆಸಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ಬುಧವಾರ ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಆರ್.ವಿ ದೇಶಪಾಂಡೆ, ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರಕಾರ ಚುನಾವಣೆಗಾಗಿ ಅಧಿಕಾರದ ದುರುಪಯೋಗ ಮಾಡಿಕೊಳ್ಳುತ್ತಿದೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಏಳು ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗಾಗಿ ಪ್ರಕಟಿಸಿದ್ದ ಹಣವನ್ನು ಈಗ ಮಂಜೂರು ಮಾಡುತ್ತಿದೆ. ತಕ್ಷಣವೇ ಇದನ್ನು ಸ್ಥಗಿತಗೊಳಿಸಬೇಕು. ಎಲ್ಲಾ ಕ್ಷೇತ್ರಗಳಿಗೂ ಪೀಟರ್ ಅವರಂತಹ ಚುನಾವಣಾ ವೀಕ್ಷಕರನ್ನು ನಿಯೋಜಿಸಬೇಕೆಂದು ಅವರು ಮನವಿ ಮಾಡಿದರು.

ಚುನಾವಣೆ ನ್ಯಾಯಸಮ್ಮತ ಪಾರರ್ದಶಕವಾಗಿ ನಡೆಯಬೇಕು ಎಂದು ಆಗ್ರಹಿಸಿದ ಅವರು, ಅಧಿಕಾರಿಗಳನ್ನು ಪಕ್ಷದ ಕೆಲಸಗಳಿಗೆ ಬಳಸಿಕೊಳ್ಳುತ್ತಿರುವುದನ್ನು ಪತ್ತೆ ಹಚ್ಚಲು ಜಿಲ್ಲಾಮಟ್ಟದಲ್ಲಿ ಜಾಗೃತ ದಳ ರಚಿಸಬೇಕೆಂದು ಆಯೋಗವನ್ನು ಆಗ್ರಹಿಸಿದರು.

ವೆಬ್ದುನಿಯಾವನ್ನು ಓದಿ