'ಬಿಜೆಪಿ ಅಂದ್ರೆ ಯಡಿಯೂರಪ್ಪ, ಈಶ್ವರಪ್ಪಗೆ ಡೋಂಟ್ ಕೇರ್'

ಶನಿವಾರ, 24 ಡಿಸೆಂಬರ್ 2011 (16:17 IST)
PR
ನನಗೆ ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಲ್ಲ. ಒಂದು ಪಕ್ಷಕ್ಕೆ ಒಬ್ಬನೇ ಕ್ಯಾಪ್ಟನ್ ಇರಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಬಿಜೆಪಿ ಅಂದ್ರೆ ಯಡಿಯೂರಪ್ಪ ಎಂಬ ನಂಬಿಕೆಯನ್ನು ಜನಮಾನಸದಲ್ಲಿ ಮೂಡಿಸಿದ್ದೇನೆ ಎಂದು ಹೇಳುವ ಮೂಲಕ ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಯಡಿಯೂರಪ್ಪ ಶುಕ್ರವಾರ ದಾವಣಗೆರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತನಗೆ ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಲ್ಲ. ಒಂದು ಪಕ್ಷ, ಒಂದು ಮನೆ, ಒಂದು ಸಂಸ್ಥೆ ಅಂದ ಮೇಲೆ ಅದಕ್ಕೆ ಒಬ್ಬನೇ ಯಜಮಾನ ಇರಬೇಕು. ಮೂರ್ನಾಲ್ಕು ಮಂದಿ ಇದ್ದರೆ ಅಲ್ಲಿ ಯಾವುದು ಸರಿಯಾಗಿ ನಡೆಯುವುದಿಲ್ಲ ಎಂದು ಹೇಳಿ ಬಿಜೆಪಿ ಮುಖಂಡರಿಗೆ ಬಿಸಿ ಮುಟ್ಟಿಸಿದ್ದರು.

ಮಾಜಿ ಮುಖ್ಯಮಂತ್ರಿಗಳ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ನಮಗೆ ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇದೆ. ನಮ್ಮ ಪಕ್ಷದ ವರಿಷ್ಠರೇ ಸಾಮೂಹಿಕ ನಾಯಕತ್ವಕ್ಕೆ ಸೂಚಿಸಿದ್ದಾರೆ. ಹಾಗಾಗಿ ನಾವೆಲ್ಲ ವರಿಷ್ಠರ ಆದೇಶಕ್ಕೆ ಬದ್ಧ ಎಂದರು.

ಪಕ್ಷಕ್ಕೆ ಒಬ್ಬನೇ ಕ್ಯಾಪ್ಟನ್ ಇರಬೇಕು. ಸಾಮೂಹಿಕ ನಾಯಕತ್ವದಲ್ಲಿ ವಿಶ್ವಾಸ ಇಲ್ಲ ಎಂಬ ಯಡಿಯೂರಪ್ಪನವರ ಹೇಳಿಕೆಗೆ ಮುಖ್ಯಮಂತ್ರಿ ಸದಾನಂದ ಗೌಡರು ಈ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ತಿಳಿಸಿದ್ದಾರೆ.

ಏತನ್ಮಧ್ಯೆ ಕೆ.ಎಸ್.ಈಶ್ವರಪ್ಪ ಮತ್ತು ಸದಾನಂದ ಗೌಡರ ಹೇಳಿಕೆಗೆ ಇಂದು ಶಿಕಾರಿಪುರದಲ್ಲಿ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, ಈಶ್ವರಪ್ಪನ ಹೇಳಿಕೆಗೆಲ್ಲ ನಾನು ಸೊಪ್ಪು ಹಾಕುವುದಿಲ್ಲ ಎಂದು ಖಾರವಾಗಿ ತಿರುಗೇಟು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ