ಬಿಜೆಪಿ ಕೋರ್ ಕಮಿಟಿ ಸಭೆ: ಬಿಎಸ್‌ವೈಗೆ ಹಸಿರು ನಿಶಾನೆ ತೋರಿದ ಹೈಕಮಾಂಡ್

ಶನಿವಾರ, 29 ಜೂನ್ 2013 (14:45 IST)
PR
PR
ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಮರಳಿ ಪಕ್ಷಕ್ಕೆ ಕರೆತರುವ ವಿಚಾರಕ್ಕೆ ಬಿಜೆಪಿ ಹೈಕಮಾಂಡ್ ಶನಿವಾರ ಗ್ರೀನ್ ಸಿಗ್ನಲ್ ನೀಡಿದೆ.

ಇಂದು ಮಲ್ಲೇಶ್ವರಂನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಉಸ್ತುವಾರಿ ತಾವರಚಂದ್ ಗೆಹ್ಲೋಟ್ ಅವರು, ಯಡಿಯೂರಪ್ಪ ಪಕ್ಷಕ್ಕೆ ಮರಳುವ ಬಗ್ಗೆ ಯಾವುದೇ ಪ್ರಸ್ತಾಪ ಬಂದಿಲ್ಲ. ಒಂದು ವೇಳೆ ಅವರು ಪಕ್ಷಕ್ಕೆ ಮರುಳುವುದಾದರೆ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರೊಂದಿಗೆ ಚರ್ಚಿಸಲಿ ಎಂದರು. ಅಲ್ಲದೆ ಯಡಿಯೂರಪ್ಪ ಅವರ ಕಡೆಯಿಂದ ಪ್ರಸ್ತಾಪ ಬಂದರೆ, ನಮ್ಮ ಪಕ್ಷ ಸಕರಾತ್ಮಕವಾಗಿ ಸ್ಪಂದಿಸಲಿದೆ ಎಂದು ಗೆಹ್ಲೋಟ್ ತಿಳಿಸಿದರು.

ಸಭೆಯಲ್ಲಿ ಯಡಿಯೂರಪ್ಪ ಅವರನ್ನು ಮರಳಿ ಪಕ್ಷಕ್ಕೆ ಕರೆತರುವುದು ಸೇರಿದಂತೆ ಮುಂಬರುವ ಲೋಕಸಭಾ ಚುನಾವಣೆಗಾಗಿ ಪಕ್ಷ ಸಂಘಟನೆ ಕುರಿತು ಚರ್ಚಿಸಲಾಗಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್, ಸಂಸದ ಅನಂತಕುಮಾರ್, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

ಇನ್ನು ಸಭೆಗೂ ಮುನ್ನ ಮಾಧ್ಯಮಕ್ಕೆ ಮಾತನಾಡಿದ್ದ ಡಿ.ವಿ.ಸದಾನಂದಗೌಡ ಅವರು, ಯಡಿಯೂರಪ್ಪ ಅವರನ್ನು ಮರಳಿ ಪಕ್ಷಕ್ಕೆ ಕರೆ ತರುವ ವಿಚಾರದಲ್ಲಿ ತಾವು ಯಾರ ಪರವೂ ಬ್ಯಾಟ್ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಾಜಿ ಸಚಿವರಾದ ಬಸವರಾಜ ಬೊಮ್ಮಾಯಿ, ಉಮೇಶ್ ಕತ್ತಿ ಹಾಗೂ ಸದಾನಂದಗೌಡ, ಸಂಸದ ಡಿ.ಬಿ.ಚಂದ್ರೇಗೌಡ ಅವರು ಯಡಿಯೂರಪ್ಪ ಅವರನ್ನು ಮತ್ತೆ ಪಕ್ಷಕ್ಕೆ ತರುವ ಪ್ರಯತ್ನ ಆರಂಭಿಸಿದ್ದಾರೆ. ಆದರೆ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಕರೆ ತರುವುದಕ್ಕೆ ಬೆಂಬಲ ನೀಡುವಷ್ಟೇ ಪ್ರಮಾಣದಲ್ಲಿ ವಿರೋಧಿಸುವವರೂ ಇದ್ದಾರೆ. ಹೀಗಾಗಿ ಈ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ಬೆಲೆ ಕೊಡಲು ಮುಖಂಡರು ಮುಂದಾಗಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ