ಬಿಜೆಪಿ ಬಿಕ್ಕಟ್ಟು ಶಮನಕ್ಕೆ ಹೈಕಮಾಂಡ್ ಕಸರತ್ತು

ಬುಧವಾರ, 28 ಅಕ್ಟೋಬರ್ 2009 (17:55 IST)
ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದಲ್ಲಿ ಸ್ಫೋಟಗೊಂಡಿರುವ ಭಿನ್ನಮತ ಶಮನಕ್ಕಾಗಿ ಇದೀಗ ರಾಷ್ಟ್ರೀಯ ವರಿಷ್ಠ ಅರುಣ್ ಜೇಟ್ಲಿ ಅವರು ರಂಗಪ್ರವೇಶ ಮಾಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸದಲ್ಲಿ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಇದೀಗ ಸಚಿವ ಕರುಣಾಕರ ರೆಡ್ಡಿ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

ಸಿಎಂ, ಶೋಭಾಕರಂದ್ಲಾಜೆ ಕಾರ್ಯ ವೈಖರಿಯಿಂದ ಅಸಮಧಾನಗೊಂಡಿರುವ ಗಣಿಧಣಿಗಳ, ಯಡಿಯೂರಪ್ಪ ಹಾಗೂ ರೇಣುಕಾಚಾರ್ಯ ಬಣಗಳಿಂದ ಮಾಹಿತಿ ಸಂಗ್ರಹ ಮಾಡಿದ ಜೇಟ್ಲಿ ಬಂಡಾಯದ ಶಮನಕ್ಕೆ ಮುಂದಾಗಿದ್ದಾರೆ. ಆರ್‌ಎಸ್‌ಎಸ್ ನಾಯಕರು ಮತ್ತು ಬಿಜೆಪಿಯ ಕೆಲ ಹಿತೈಷಿ ಮುಖಂಡರೊಂದಿಗೆ ಕೆಲ ಹೊತ್ತು ಚರ್ಚೆ ಮಾಡಿದ ಜೇಟ್ಲಿ ಸರ್ಕಾರದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿಗೆ ಕಾರಣಗಳೇನು, ಪರಿಹಾರ ಮಾರ್ಗಗಳು ಯಾವುವು ಎಂಬ ಬಗ್ಗೆ ಸಮಾಲೋಚಿಸಿದರು.

ಇಂತಹ ಸಂದಿಗ್ದ ಸ್ಥಿತಿಯಲ್ಲಿ ಪಕ್ಷ ಇಬ್ಭಾಗವಾದರೆ ಅದು ಬಿಜೆಪಿ ರಾಷ್ಟ್ರೀಯ ವರ್ಚಸ್ಸಿನ ಮೇಲೂ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಜೇಟ್ಲಿ ಬಿಕ್ಕಟ್ಟನ್ನು ಸುಸೂತ್ರವಾಗಿ ಬಗೆಹರಿಸುವ ಕುರಿತು ತಂತ್ರ ಹೆಣೆಯುತ್ತಿದ್ದಾರೆ.

ಮಾಹಿತಿ ನೀಡದ ಸಿಎಂ: ಬಿಕ್ಕಟ್ಟಿನ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸದಲ್ಲಿ ಜೇಟ್ಲಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಯಾವುದೇ ಮಾಹಿತಿಯನ್ನು ನೀಡಲು ನಿರಾಕರಿಸಿದರು.

ಪಟ್ಟು ಬಿಡದ ಗಣಿಧಣಿಗಳು: ವಿಧಾನಸಭಾ ಸ್ಪೀಕರ್ ಜಗದೀಶ್ ಶೆಟ್ಟರ್ ಈಗಾಗಲೇ ಸಿದ್ದಗಂಗಾಶ್ರೀಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮತ್ತೊಂದೆಡೆ ಶಾಸಕ ರೇಣುಕಾಚಾರ್ಯ ನೇತೃತ್ವದಲ್ಲಿ ಶಾಸಕರ ತಂಡವೊಂದು ಶ್ರೀಗಳನ್ನು ಭೇಟಿಯಾಗಿ ಚರ್ಚೆ ನಡೆಸಿದೆ. ಏತನ್ಮಧ್ಯೆ ರೆಡ್ಡಿಗಳಿಗೆ ತಿರುಗೇಟು ಎಂಬಂತೆ ಬುಧವಾರ ಬೆಳಿಗ್ಗೆ ಬಳ್ಳಾರಿಯ ಡಿಸಿ, ಎಸ್ಪಿ, ಡಿಸಿಎಫ್‌ ಅನ್ನು ಸಿಎಂ ದಿಢೀರ್ ವರ್ಗಾವಣೆ ಮಾಡಿರುವುದು ರೆಡ್ಡಿಗಳಿಗೆ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಮತ್ತು ಅತೃಪ್ತ ಶಾಸಕ, ಸಚಿವರು, ರೆಡ್ಡಿಗಳ ನಡುವೆ ತಲೆದೋರಿರುವ ಬಿಕ್ಕಟ್ಟು ಶಮನವಾಗುವುದು ರಾಜ್ಯರಾಜಕೀಯ ವಲಯದಲ್ಲಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ವೆಬ್ದುನಿಯಾವನ್ನು ಓದಿ