ಬಿಜೆಪಿ ಸಭೆ: 'ಗೌಡ್ರಂತೆ ಕಿತ್ತಾಡಿ ಪಕ್ಷ ಹಾಳು ಮಾಡಬೇಡಿ'

ಗುರುವಾರ, 21 ಏಪ್ರಿಲ್ 2011 (12:20 IST)
ಬಿಜೆಪಿಯೊಳಗೆ ಉಂಟಾಗಿರುವ ಭಿನ್ನಮತ ಶಮನಕ್ಕಾಗಿಯೇ ಕೇಂದ್ರೀಯ ವೀಕ್ಷಕ ದೇವೇಂದ್ರ ಪ್ರಧಾನ್ ಅವರು ಬೆಂಗಳೂರಿಗೇನೋ ಆಗಮಿಸಿದ್ದಾರೆ. ಆದರೆ ಅವರು ಆಗಮಿಸಿದ ಎರಡನೇ ದಿನ, ಅವರ ಅನುಪಸ್ಥಿತಿಯಲ್ಲೇ ಯಲಹಂಕದ ದೊಡ್ಡೀಸ್ ರೆಸಾರ್ಟ್‌ನಲ್ಲಿ ಗುರುವಾರ ನಡೆದ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಮತ್ತು ಶಾಸಕ ಶ್ರೀನಿವಾಸ್ ನಡುವೆ ತೀಕ್ಷ್ಣ ಮಾತಿನ ಚಕಮಕಿ ನಡೆಯಿತೆಂದು ಮೂಲಗಳು ಹೇಳಿವೆ. ದೇವೇಗೌಡ-ಹೆಗಡೆಯಂತೆ ಕಿತ್ತಾಡಿ ಪಕ್ಷ ಹಾಳು ಮಾಡಬೇಡಿ ಎಂದು ಶಾಸಕರು ಕೂಗಾಡಿದ್ದೇ ಈಶ್ವರಪ್ಪ ಕೋಪಕ್ಕೆ ಕಾರಣ.

ಗುರುವಾರ ಬೆಳಿಗ್ಗೆ ಶಾಸಕರ ಸಭೆಯು ಪ್ರಧಾನ್ ಅವರ ನಿಗೂಢ ಅನುಪಸ್ಥಿತಿಯಲ್ಲಿ ಆರಂಭವಾಗಿತ್ತು. ಈಶ್ವರಪ್ಪ, ಮುಖ್ಯಮಂತ್ರಿ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮತ್ತು ಅನಂತ್ ಕುಮಾರ್ ಸಹಿತ ಮುಖಂಡರು, ಶಾಸಕರು, ಮಂತ್ರಿಗಳೆಲ್ಲ ಪಾಲ್ಗೊಂಡಿದ್ದರು. ಸಭೆಯಲ್ಲಿ ಮಾತನಾಡಲು ಅವಕಾಶ ದೊರೆತ ತಕ್ಷಣ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಶ್ರೀನಿವಾಸ್ ಎದ್ದು ನಿಂತರು.

"ದೇವೇಗೌಡ ಮತ್ತು ರಾಮಕೃಷ್ಣ ಹೆಗಡೆಯವರಂತೆ ಕಿತ್ತಾಡಬೇಡಿ. ಅವರ ಕಿತ್ತಾಟದಿಂದಾಗಿ ಪಕ್ಷವು ಯಾವ ರೀತಿ ಹೋಳಾಯಿತೆಂದು ನಿಮಗೆ ಗೊತ್ತಿದೆ. ಈ ರೀತಿ ಕಿತ್ತಾಡಿ ಪಕ್ಷವನ್ನು ಹಾಳು ಮಾಡಬೇಡಿ" ಎಂದು ಒಂದು ಹಂತದಲ್ಲಿ ಪ್ರಚೋದನೆ ಪಡೆದವರಂತೆ ಆವೇಶದಿಂದ ಮಾತನಾಡಿದರು. "ಜನತಾ ಪಕ್ಷದ ರೀತಿ ಬಿಜೆಪಿಯಲ್ಲಿ ಆಗಬಾರದು. ನಾವು ನಾವೇ ಕಿತ್ತಾಡುತ್ತಿದ್ದರೆ ಪಕ್ಷದ ಬೆಳವಣಿಗೆಗೆ ಇದು ಒಳ್ಳೆಯದಲ್ಲ" ಎಂದರು ಶ್ರೀನಿವಾಸ್.

ಇದು ಈಶ್ವರಪ್ಪ ಅವರನ್ನು ಕೆರಳಿಸಿತು. 'ಸಭೆಯಲ್ಲಿ ನಿಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಮಾತನಾಡಿ. ಅದಕ್ಕೆ ಅವಕಾಶ ಕೊಟ್ಟಿದ್ದೇವೆ. ಅಭಿವೃದ್ಧಿ ಬಿಟ್ಟು ಬೇರೆ ವಿಚಾರ ಪ್ರಸ್ತಾಪಿಸಬೇಡಿ' ಎಂದ ಈಶ್ವರಪ್ಪ, 'ನಾವಿಲ್ಲಿ ಯಾರಿಂದಲೂ ಬುದ್ಧಿ ಹೇಳಿಸಿಕೊಳ್ಳಲು ಬಂದಿಲ್ಲ' ಎಂದೂ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಹೇಳಬೇಕಾದ್ದನ್ನು ಹೇಳಲು ಅವಕಾಶ ಕೊಡದಾಗ ಶ್ರೀನಿವಾಸ್ ಸುಮ್ಮನಾಗಿ ಮಾತು ಮುಗಿಸಿ ಕುಳಿತರು ಎಂದು ಮೂಲಗಳು ಹೇಳಿದ್ದು, ಭಿನ್ನಮತ ಶಮನಕ್ಕಾಗಿಯೇ ನಡೆದ ಸಭೆ ಇದೀಗ ಕಾಟಾಚಾರದ ಸಭೆಯಾಗುತ್ತಿದೆಯೇ ಎಂಬ ಅನುಮಾನ ಮೂಡಿಸಿದೆ. ಕನಿಷ್ಠ ಪಕ್ಷ ಒಬ್ಬೊಬ್ಬರನ್ನೂ ಕರೆದು ಅಹವಾಲು ಕೇಳಬೇಕಿತ್ತು ಎಂಬುದು ಅನೇಕ ಬಿಜೆಪಿ ಶಾಸಕರ ಅಭಿಪ್ರಾಯವಾಗಿದ್ದು, ಅವರು ಕೂಡ ಸಭೆಯ ಬಗ್ಗೆ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ.

ನಂತರ ಜಿಲ್ಲಾವಾರು ಶಾಸಕರಿಂದ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಮಾಲೋಚನೆಯು ಮುಂದುವರಿಯಿತು.

ವೆಬ್ದುನಿಯಾವನ್ನು ಓದಿ