ಬಿಬಿಎಂಪಿಗೆ 10 ಸಾವಿರ ಕೋಟಿ ಉಂಡೆ ನಾಮ..!

ಶುಕ್ರವಾರ, 29 ನವೆಂಬರ್ 2013 (11:38 IST)
PR
ಆಪ್ಟಿಕಲ್ ಫೈಬರ್ ಸೇವಾ ಸಂಸ್ಥೆಗಳು ಮತ್ತು ಇಂಟರ್‌ನೆಟ್ ಸೇವಾ ಸಂಸ್ಥೆಗಳಂತಹ ಸುಮಾರು 17 ಕಂಪನಿಗಳು ಬೆಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ 65,000 ಕಿಲೋಮೀಟರ್‌ಗಳಿಗೂ ಹೆಚ್ಚು ಉದ್ದದ ರಸ್ತೆಗಳಲ್ಲಿ ಒಎಫ್‌ಸಿ (ಆಪ್ಟಿಕಲ್ ಫೈಬರ್ ಸೇವಾ ಸಂಸ್ಥೆಗಳು) ಡಕ್ಟ್‌ಗಳನ್ನು ಮಾಡಿ ಅನಧಿಕೃತ ಕೇಬಲ್ ಅಳವಡಿಸಿವೆ. ಇದರಿಂದಾಗಿ ಬಿಬಿಎಂಪಿಗೆ 10 ಸಾವಿರ ಕೋಟಿ ರೂಪಾಯಿಗಳ ಉಂಡೆನಾಮ ತಿಕ್ಕಿದಂತಾಗಿದೆ.

ಪಾಲಿಕೆಗೆ ಸೇರಿದ 10,400 ಕೋಟಿ ಮೌಲ್ಯದ ಜಾಗವನ್ನು ವಿವಿಧ ಆಪ್ಟಿಕಲ್ ಫೈಬರ್‌ ಸೇವಾ ಕಂಪನಿಗಳು ಬಳಸಿಕೊಂಡಿವೆ. ಹೀಗಾಗಿ ಕಳೆದ 15 ವರ್ಷಗಳಲ್ಲಿ ಬಿಬಿಎಂಪಿಗೆ ಸುಮಾರು 10,000 ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ.

ಆಫ್ಟಿಕಲ್ ಫೈಬರ‍್ ಸಂಸ್ಥೆಗಳು ಅಥವ ಇಂಟರ್‌ನೆಟ್‌ ಸೆವಾ ಸಂಸ್ಥೆಗಳು ರಸ್ತೆಯಲ್ಲಿ ಕೇಬಲ್‌ ಲೈನ್‌ಗಳನ್ನು ಹಾಕಬೇಕಾದ್ರೆ ಅದಕ್ಕಾಗಿ ಬಿಬಿಎಮಪಿಯಿಂದ ಪರವಾನಗಿಯನ್ನು ಪಡೆಯಬೇಕು. ಮತ್ತು ಅದಕ್ಕಾಗಿ ಸಂಸ್ಥೆಗಳು ಬಿಬಿಎಂಪಿಗೆ ನೆಲಬಾಡಿಗೆಯನ್ನು ಪಾವತಿ ಮಾಡಬೇಕು. ಆದ್ರೆ ಈ ಸಂಸ್ಥೆಗಳು ಕಳೆದ 15 ವರ್ಷಗಳಿಂದ ನೆಲಬಾಡಿಗೆಯನ್ನು ಪಾವತಿಸದೇ ಬಿಬಿಎಂಪಿಗೆ ವಂಚಿಸಿವೆ ಎಂದು ತನಿಖಾ ಸಮಿತಿಯ ಮುಖ್ಯಸ್ಥ ಎನ್.ಆರ್.ರಮೇಶ್ ತಿಳಿಸಿದ್ದಾರೆ.

ಈ ಕಂಪನಿಗಳು ಪಾಲಿಕೆ ವ್ಯಾಪ್ತಿಯ ನೆಲದಲ್ಲಿ ಒಎಫ್‌ಸಿ ಅಳವಡಿಸಿ ವರ್ಷಕ್ಕೆ 10ಸಾವಿರ ಕೋಟಿಗಳಿಗೂ ಹೆಚ್ಚಿನ ಆದಾಯ ಗಳಿಸುತ್ತಿವೆ. ಆದಾಗ್ಯೂ ಈವರೆಗೂ ಪಾಲಿಕೆಗೆ ಪಾವತಿಸಿರುವುದು ಮಾತ್ರ ಕೇವಲ 58 ಕೋಟಿಗಳು ಮಾತ್ರ. ಆದ್ದರಿಂದ ಉಳಿದ ಹಣವನ್ನು ಪಾವತಿಸಲು ಈ ಕಂಪನಿಗಳಿಗೆ ಈ ತಿಂಗಳ ಅಂತ್ಯದವರೆಗೆ ಗಡುವು ನೀಡಲಾಗಿದ್ದು, ತಪ್ಪಿದಲ್ಲಿ ಕಂಪೆನಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಸಮಿತಿ ಸದಸ್ಯ ಎಸ್.ಹರೀಶ್ ತಿಳಿಸಿದರು.

ವೆಬ್ದುನಿಯಾವನ್ನು ಓದಿ