ಬಿರುಕು ಬಿಟ್ಟ ಭೂಮಿ: ಆತಂಕದಲ್ಲಿ ಜನತೆ

ಬುಧವಾರ, 29 ಮೇ 2013 (14:31 IST)
PR
PR
ಸಾಗರ ತಾಲೂಕಿನ ಆನಂದಪುರಂ ಹೋಬಳಿ ಆಚಾಪುರ ಗ್ರಾ.ಪಂ.ವ್ಯಾಪ್ತಿಯ ಲಕ್ಕವಳ್ಳಿ ಗ್ರಾಮದಲ್ಲಿ ಮಂಗಳವಾರ ಧಾರಾಕಾರ ಮಳೆ ಸುರಿದ ಸ್ವಲ್ಪ ಹೊತ್ತಿನಲ್ಲಿಯೇ ಗದ್ದೆಯ ಭೂಮಿ ಅಲ್ಲಲ್ಲಿ ಬಿರುಕು ಬಿಟ್ಟಿದ್ದು ಗ್ರಾಮಸ್ಥರು ತೀವ್ರ ಆತಂಕಗೊಳ್ಳುವಂತಾಗಿದೆ.

ಗ್ರಾಮದ ಸರ್ವೆ ನಂಬರ್ 32 ಮತ್ತು ಸರ್ವೆ ನಂಬರ್ 8 ರಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಹಿಂಭಾಗದ ತಗ್ಗಿನಲ್ಲಿ ಈ ಗದ್ದೆಯ ಬಿರುಕು ಅಚ್ಚರಿ ಜೊತೆಗೆ ಆತಂಕಕ್ಕೂ ಕಾರಣವಾಗಿದೆ. ಕೆಲವೆಡೆ ಸುಮಾರು 50 ಅಡಿ ಉದ್ದಕ್ಕೂ ಸರಾಸರಿ 4 ಅಡಿ ಆಳದ ಬಿರುಕು ಉಂಟಾಗಿದೆ. ಬಿರುಕಿನ ಅಗಲ ಅರ್ಧ ಅಡಿಯಷ್ಟಿದೆ.

ಇಂದು ಬೆಳಿಗ್ಗೆ ಸಹ ನೋಡ ನೋಡುತ್ತಿದ್ದಂತೆ ಮತ್ತೆ ಅಲ್ಲಲ್ಲಿ ಬಿರುಕು ಉಂಟಾಗುತ್ತಿದ್ದು, ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಗುಂಪು ಗುಂಪಾಗಿ ಬಂದು ವೀಕ್ಷಿಸಿದರು. ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೇಲಾಧಿಕಾರಿಗಳಿಗೆ ವರದಿ ನೀಡಿದ್ದಾರೆ.

ಹಿಂದೆಂದೂ ಕಾಣದ ರೀತಿಯಲ್ಲಿ ಭೂಮಿ ಬಿರಿ ಬಿಟ್ಟಿದ್ದು ಭೂಕಂಪ ಇತ್ಯಾದಿ ಮುನ್ಸೂಚನೆ ಇದಾಗಿರಬಹುದೇ ಎಂಬುದು ಗ್ರಾಮಸ್ಥರ ಭೀತಿಗೆ ಕಾರಣವಾಗಿದೆ. ಈ ಬಿರುಕಿನ ಬಗ್ಗೆ ಸಮಗ್ರ ಅಧ್ಯಯನ ನಡೆಸಬೇಕು ಎಂದು ಗ್ರಾಮಸ್ಥರು ಸರಕಾರವನ್ನು ಒತ್ತಾಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ