ಬೇಲೂರು ವಿಷ್ಣುಸಮುದ್ರ ಕೆರೆಗೆ ಉರುಳಿದ ಬಸ್: 7 ಜನರ ಸಾವು

ಮಂಗಳವಾರ, 23 ಜುಲೈ 2013 (16:31 IST)
WD
WD
ಬೇಲೂರು: ಹಾಸನದ ಬೇಲೂರಿನ ಹೊರವಲಯದ ವಿಷ್ಣುಸಮುದ್ರ ಕೆರೆಗೆ ಚಾಲಕನ ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್ಸೊಂದು ಮಂಗಳವಾರ ಬೆಳಗಿನ ಜಾವ ಉರುಳಿಬಿದ್ದು ಸುಮಾರು 7 ಜನರು ಮೃತಪಟ್ಟಿರುವ ಭೀಕರ ದುರಂತ ಸಂಭವಿಸಿದೆ. ಶಾಲಾ, ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ಸುಮಾರು 75ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು.

ಬಸ್ ಸಕಲೇಶಪುರದಿಂದ ಬೇಲೂರಿಗೆ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿ ಸುಮಾರು ಏಳು ಶವಗಳನ್ನು ಬಸ್‌ನಿಂದ ಹೊರತೆಗೆದಿದ್ದಾರೆ. ಬಸ್ ತಲೆಕೆಳಗಾಗಿ ಸುಮಾರು ಮುಕ್ಕಾಲು ಭಾಗ ನೀರಿನಲ್ಲಿ ಮುಳುಗಡೆಯಾಗಿದ್ದು, ಬಸ್‌ನ ಕಿಟಕಿಗಳ ಗಾಜನ್ನು ಒಡೆದು ಸಿಕ್ಕಿಕೊಂಡ ಪ್ರಯಾಣಿಕರನ್ನು ಹೊರತೆಗೆಯುವ ಪ್ರಯತ್ನ ನಡೆಸಲಾಗಿದೆ.

ಕೆರೆಗೆ ತಡೆಗೋಡೆ ನಿರ್ಮಿಸದಿರುವುದರಿಂದ ಈ ದುರಂತ ಸಂಭವಿಸಿದೆಯೆಂದು ಹೇಳಲಾಗಿದೆ. ಬಸ್ಸನ್ನು ಕ್ರೇನ್ ಬಳಸಿ ಮೇಲೆತ್ತುವ ಪ್ರಯತ್ನ ನಡೆಸಲಾಗುತ್ತಿದೆ. ಅಪಘಾತ ಹೇಗೆ ಸಂಭವಿಸಿದೆಯೆಂಬ ಬಗ್ಗೆ ನಿಖರವಾದ ಮಾಹಿತಿಯಿಲ್ಲ. ಕಳೆದ ಎರಡು ಮೂರು ದಿನಗಳಿಂದ ಆ ಪ್ರದೇಶದಲ್ಲಿ ಬಿದ್ದ ಧಾರಾಕಾರ ಮಳೆಯಿಂದ ವಿಷ್ಣುಸಮುದ್ರ ಕೆರೆ ತುಂಬಿತುಳುಕುತ್ತಿತ್ತು. ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ ಬಸ್ಸಿನಲ್ಲಿ ಇನ್ನೂ 20ರಿಂದ 25 ಜನರಿದ್ದಾರೆಂದು ಗೊತ್ತಾಗಿದೆ.

WD
WD
ವಿಷ್ಣುಸಮುದ್ರ ಕೆರೆಯಲ್ಲಿ ಸಾಕಷ್ಟು ಹೂಳು ತುಂಬಿರಬಹುದು ಎಂದು ಶಂಕಿಸಲಾಗಿದೆ. ಈ ಹೂಳಿನಲ್ಲಿ ಇನ್ನೂ ಕೆಲವರ ಶವ ಸಿಕ್ಕಿಬಿದ್ದಿರಬಹುದು ಎಂದು ಶಂಕೆಯ ನಿಟ್ಟಿನಲ್ಲಿ ತೆಪ್ಪಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದುವರೆಗೆ 30 ಜನರನ್ನು ರಕ್ಷಿಸಲಾಗಿದ್ದು, ಬಸ್ ಡ್ರೈವರ್ ಸ್ಥಿತಿ ಗಂಭೀರವಾಗಿದೆ. ರಕ್ಷಿಸಲಾದ 30 ಜನರಲ್ಲಿ ಸುಮಾರು 8ರಿಂದ 10 ಜನರ ಸ್ಥಿತಿ ಚಿಂತಾಜನಕವಾಗಿದೆ.

ಸುವರ್ಣಕರ್ನಾಟಕ ಸಾರಿಗೆ ಬಸ್ ಪದೇ ಪದೇ ಕೆಡುತ್ತಿತ್ತೆಂದು ಹೇಳಲಾಗಿದ್ದು, ಸಕಲೇಶಪುರ ಡಿಪೋಗೆ ಈ ಕುರಿತು ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬಸ್ಸನ್ನು ಡಿಪೋದ ವ್ಯವಸ್ಥಾಪಕರು ಸರಿಯಾಗಿ ನಿರ್ವಹಣೆ ಮಾಡದೇ ಪ್ರಯಾಣಕ್ಕೆ ಬಿಟ್ಟಿದ್ದರಿಂದ ಈ ದುರಂತ ಸಂಭವಸಿದೆ ಎಂದು ಆರೋಪಿಸಲಾಗುತ್ತಿದೆ. ಸ್ಥಳದಲ್ಲೇ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಚಿಕ್ಕಮಗಳೂರು ಡಿಪೋಗೆ ಈ ಬಸ್ ಸೇರಿದ್ದೆಂದು ತಿಳಿದುಬಂದಿದೆ. ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡುವುದೆಂದು ಘೋಷಿಸಲಾಗಿದೆ. ಕೆ.ಎ. 18, ಎಫ್. 151 ಸಂಖ್ಯೆಯ ಬಸ್ಸನ್ನು ಎರಡು ಕ್ರೇನ್‌ಗಳನ್ನು ಬಳಸಿ ಮೇಲೆತ್ತಲಾಗಿದೆ.

PTI
PTI
ಬೇಲೂರಿನ ವಿಷ್ಣುಸಮುದ್ರ ಕೆರೆಗೆ ಉರುಳಿದ ಬಸ್ ದುರಂತದಲ್ಲಿ ಸತ್ತವರ ಸಂಖ್ಯೆ 8ಕ್ಕೇರಿದೆ. ಸ್ಟೇರಿಂಗ್ ಕಟ್ ಆಗಿದ್ದರಿಂದ ಈ ದುರಂತ ಸಂಭವಸಿದೆಯೆಂದು ಹೇಳಲಾಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಪರಿಸ್ಥಿತಿಯನ್ನು ವಿಚಾರಿಸಿದರು. ಇದುವರೆಗೆ ಸುಮಾರು 52 ಜನರನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆಂದು ಹೇಳಲಾಗಿದೆ.

ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 3 ಲಕ್ಷ ಪರಿಹಾರ ನೀಡುವುದಾಗಿ ಸಚಿವರ ರಾಮಲಿಂಗಾರೆಡ್ಡಿ ಘೋಷಿಸಿದ್ದಾರೆ. ಬೆಳಿಗ್ಗೆ 9.30ರ ಸುಮಾರಿಗೆ ವೇಗವಾಗಿ ಬಂದ ಬೈಕೊಂದು ಬಸ್ಸಿಗೆ ಡಿಕ್ಕಿ ಹೊಡೆದಿದ್ದರಿಂದ ಬಸ್ಸು ನಿಯಂತ್ರಣ ತಪ್ಪಿ ಕೆರೆಗೆ ಉರುಳಿಬಿದ್ದಿತೆಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಬಸ್ ವೃತ್ತಾಂತ: ವಿಷ್ಣುಸಮುದ್ರ ಕೆರೆಗೆ ಉರುಳಿದ ಬಸ್ ವಾರದಲ್ಲಿ ಕನಿಷ್ಠ ಎರಡು ಬಾರಿಯಾದರೂ ಕೆಟ್ಟು ನಿಲ್ಲುತ್ತಿತ್ತು. ಬಸ್‌ ಬ್ರೇಕ್‌ನಲ್ಲಿ ತೊಂದರೆಯಿತ್ತು. 2007ರಿಂದ ಓಡುತ್ತಿದ್ದ ಈ ಬಸ್ ಸುಮಾರು 7 ಲಕ್ಷ 93 ಕಿ.ಮೀ ದೂರ ಪ್ರಯಾಣಿಸಿದೆ. ಪ್ರತಿ ದಿನ ಏಳು ಟ್ರಿಪ್ ಹೊಡೆಯುತ್ತಿತ್ತು. ಇಷ್ಟೆಲ್ಲಾ ಲೋಪದೋಷಗಳಿಂದ ಕೂಡಿದ ಬಸ್ಸನ್ನು ಸರಿಯಾಗಿ ದುರಸ್ತಿ ಮಾಡದೇ ಟ್ರಿಪ್‌‌ಗೆ ಬಿಟ್ಟಿದ್ದು, ಡಿಪೋ ವ್ಯವಸ್ಥಾಪಕರ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ವೆಬ್ದುನಿಯಾವನ್ನು ಓದಿ