ಬೇಲೆಕೇರಿ ಪ್ರಕರಣ: ಸಿಬಿಐನಿಂದ ನಾಲ್ಕು ಟ್ರಂಕ್‌ ದಾಖಲೆ ಸಲ್ಲಿಕೆ

ಮಂಗಳವಾರ, 28 ಮೇ 2013 (15:41 IST)
PR
PR
ಬೇಲೆಕೇರಿ ಬಂದರಿನ ಮೂಲಕ ನಡೆದ ಅದಿರು ಕಳ್ಳಸಾಗಣೆ ಹಗರಣಕ್ಕೆ ಸಂಬಂಧಿಸಿದ ಮೊದಲ ಕ್ರಿಮಿನಲ್ ಮೊಕದ್ದಮೆಯಲ್ಲಿ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಸೇರಿದಂತೆ ಏಳು ಆರೋಪಿಗಳ ವಿರುದ್ಧ ಸಿಬಿಐ ಸೋಮವಾರ ಆರೋಪಪಟ್ಟಿ ಸಲ್ಲಿಸಿದೆ. ಒಂದು ಕಂಪೆನಿ ಬಳಸಿಕೊಂಡು ರೆಡ್ಡಿ, ರೂ 198 ಕೋಟಿ ಸಂಪಾದಿಸಿದ್ದರು ಎಂದು ಆರೋಪಪಟ್ಟಿ ಹೇಳಿದೆ.

ನಿವೃತ್ತ ಐಎಫ್‌ಎಸ್ ಅಧಿಕಾರಿ ಎಸ್. ಮುತ್ತಯ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಎಸ್.ಪಿ.ರಾಜು, ಜನಾರ್ದನ ರೆಡ್ಡಿ ಅವರ ಆಪ್ತ ಕೆ.ಮೆಹಫೂಜ್ ಅಲಿಖಾನ್, ಹೊಸಪೇಟೆಯ ಕೆ.ವಿ.ನಾಗರಾಜ್ (ಸ್ವಸ್ತಿಕ್ ನಾಗರಾಜ್), ಮಹೇಶ್‌ಕುಮಾರ್ (ಖಾರದಪುಡಿ ಮಹೇಶ್) ಹಾಗೂ ಐಎಫ್‌ಎಸ್ ಅಧಿಕಾರಿ ಮನೋಜ್‌ಕುಮಾರ್ ಶುಕ್ಲಾ ವಿರುದ್ಧ 50ಕ್ಕೂ ಹೆಚ್ಚು ಪುಟಗಳ ಆರೋಪಪಟ್ಟಿ ಸಲ್ಲಿಸಲಾಗಿದೆ. ನಾಲ್ಕು ಟ್ರಂಕ್‌ಗಳಷ್ಟು ದಾಖಲೆಗಳನ್ನು ಸಿಬಿಐ ತನಿಖಾ ತಂಡ ನ್ಯಾಯಾಲಯಕ್ಕೆ ಸಲ್ಲಿಸಿದೆ. 215 ಸಾಕ್ಷಿದಾರರನ್ನು ಅರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ.

ಅದಿರು ಕಳ್ಳಸಾಗಣೆ ಹಗರಣಕ್ಕೆ ಸಂಬಂಧಿಸಿದಂತೆ ನಾಲ್ಕು ಕಂಪೆನಿಗಳ ವಿರುದ್ಧ ನೇರವಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆ ನಡೆಸುವಂತೆ ಸಿಬಿಐಗೆ ಆದೇಶಿಸಿದ್ದ ಸುಪ್ರೀಂ ಕೋರ್ಟ್, ಕಡಿಮೆ ಪ್ರಮಾಣದ ಅದಿರು ರಫ್ತು ಮಾಡಿದ ಕಂಪೆನಿಗಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ವಿಚಾರಣೆ ನಡೆಸುವಂತೆ ನಿರ್ದೇಶಿಸಿತ್ತು. ನ್ಯಾಯಾಲಯದ ಆದೇಶದಂತೆ ಬೆಂಗಳೂರು ಸಿಬಿಐ ಅಧಿಕಾರಿಗಳು ನಾಲ್ಕು ಮೊಕದ್ದಮೆಗಳನ್ನು ದಾಖಲಿಸಿದ್ದರು. ಈ ಪೈಕಿ ಜನಾರ್ದನ ರೆಡ್ಡಿ, ಎಸ್‌ಬಿ ಲಾಜಿಸ್ಟಿಕ್ಸ್ ಎಂಬ ಬೇನಾಮಿ ಕಂಪೆನಿಯ ಮೂಲಕ ನಡೆಸಿದ ಅದಿರು ಕಳ್ಳಸಾಗಣೆಗೆ ಸಂಬಂಧಿಸಿದ ಮೊಕದ್ದಮೆಯಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿದೆ.

ವೆಬ್ದುನಿಯಾವನ್ನು ಓದಿ