ಭ್ರಷ್ಟಾಚಾರದ ದಾಖಲೆ ಇದ್ರೆ ತೋರಿಸಿ:ಯಡ್ಡಿಗೆ ಶೆಟ್ಟರ್ ಸವಾಲ್

ಮಂಗಳವಾರ, 30 ಏಪ್ರಿಲ್ 2013 (19:28 IST)
PR
ಬಿ.ಎಸ್. ಯಡಿಯೂರಪ್ಪ, ಧನಂಜಯಕುಮಾರ್ ಅವರು ಭ್ರಷ್ಟಾಚಾರ ನಡೆದಿದೆ ಎಂದು ಹೇಳುವುದನ್ನು ಬಿಟ್ಟು ಸ್ಪಷ್ಟ ದಾಖಲೆ ಇದ್ದರೆ ನೀಡಲಿ. ಒಬ್ಬರು ಬೆಳಗ್ಗೆ ಆರೋಪಿಸಿದರೆ, ಮತ್ತೊಬ್ಬರು ಮಧ್ಯಾಹ್ನ ಕ್ಷಮೆ ಕೇಳುತ್ತಾರೆ. ಇದು ಚಾರಿತ್ರ್ಯ ವಧೆ ಮಾಡುವ ಕ್ರಿಯೆಯಷ್ಟೇ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ.

ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಹೇಳುವ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ನಿರ್ದಿಷ್ಟ ಪ್ರಕರಣ ಉಲ್ಲೇಖಸಿ ದಾಖಲೆ ತೋರಿಸಿ ಮಾತನಾಡಲಿ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸವಾಲು ಹಾಕಿದ್ದಾರೆ.

ಬೆಂಗಳೂರು ಪ್ರೆಸ್ ಕ್ಲಬ್ ಹಾಗೂ ಬೆಂಗಳೂರು ವರದಿಗಾರರ ಕೂಟ ಜಂಟಿಯಾಗಿ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ಕಲ್ಲಿದ್ದಲು, ಹೆಲಿಕಾಪ್ಟರ್, 2ಜಿ ಸ್ಪೆಕ್ಟ್ರಮ್, ನರೇಗಾ ಹಗರಣದಲ್ಲಿ ಮುಳುಗಿರುವ ಕಾಂಗ್ರೆಸ್‌ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಹೇಳಿದರು. ಪ್ರತಿಪಕ್ಷವಾಗಿ ಒಂದು ಬಾರಿಯೂ ಭ್ರಷ್ಚಾಚಾರದ ಬಗ್ಗೆ ಸದನದಲ್ಲಿ ಕಾಂಗ್ರೆಸ್ ದನಿ ಎತ್ತಿ ಮಾತನಾಡಲಿಲ್ಲ. ಗಮನಸೆಳೆಯುವ ಚರ್ಚೆಯನ್ನೂ ಮಾಡಲಿಲ್ಲ. ಈಗೆಲ್ಲಿಂದ ಭ್ರಷ್ಟಾಚಾರದ ಮಾತು ಬಂದಿತು ? ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರದಿಂದಲೇ ರಾಜ್ಯಕ್ಕೆ ಸಾಕಷ್ಟು ಅನ್ಯಾಯವಾಗಿದೆ. ಉದಾಹರಣೆಗೆ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ನೀಡಿಲ್ಲ. ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿ ರಾಜ್ಯಕ್ಕೆ ಒಂದು ಕಿಮೀ ರಸ್ತೆಯನ್ನೂ ಕೊಟ್ಟಿಲ್ಲ. ಬರಗಾಲ, ನೆರೆ ಪರಿಹಾರಕ್ಕೆ ಬೇಡಿಕೆಗನುಗುಣವಾಗಿ ಕೇಂದ್ರ ಸ್ಪಂದಿಸಿಲ್ಲ ಎಂದು ಶೆಟ್ಟರ್ ಟೀಕಿಸಿದರು.

ನಮ್ಮ ಸಾರಿಗೆ ಸಂಸ್ಥೆಗಳು ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಸಾಧನೆಯನ್ನು ಮೆಚ್ಚಿ ಪ್ರಧಾನಮಂತ್ರಿಯವರೇ ನಮ್ಮ ಸಚಿವರಿಗೆ ಪ್ರಶಸ್ತಿ ನೀಡಿದ್ದಾರೆ. ಅಲ್ಲದೆ, ಇಬ್ಬರು ಪ್ರಧಾನ ಕಾರ್ಯದರ್ಶಿಯವರಿಗೂ ಕೇಂದ್ರದಿಂದ ಪ್ರಶಸ್ತಿ ಲಭಿಸಿದೆ. ಅವರೇ ಪ್ರಶಸ್ತಿ ಕೊಟ್ಟು ಈಗ ಭ್ರಷ್ಟಾಚಾರ ನಡೆಯುತ್ತಿದೆ ಎಂದರೆ ಇದು ಕೇವಲ ಗೊಂದಲ ಸೃಷ್ಟಿಸುವ ಮಾತಾಗುತ್ತದೆ. ಇದರಿಂದ ಕೇಂದ್ರ ರಾಜ್ಯಕ್ಕೆ ಮಾಡಿರುವ ಅನ್ಯಾಯವನ್ನು ಮರೆಮಾಚಲು ಸಾಧ್ಯ ಇಲ್ಲ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ಗೆ ನಾಯಕತ್ವವೇ ಇಲ್ಲ. ನಾಯಕ ಯಾರು ಎಂದು ಘೋಷಿಸಿದರೆ ಪಕ್ಷ ಅಧೋಗತಿಗೆ ಇಳಿಯುತ್ತದೆ. ಪರಮೇಶ್ವರ್, ಸಿದ್ದರಾಮಯ್ಯ, ಎಸ್.ಎಂ. ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಜಾಫರ್ ಷರೀಫ್ ಎಲ್ಲರೂ ಮುಖ್ಯಮಂತ್ರಿಯಾಗಲು ಪೈಪೋಟಿಯಲ್ಲಿದ್ದಾರೆ. ಹೀಗಾಗಿ ಕಾಂಗ್ರೆಸ್‌ಗೆ ಬಹುಮತ ಬರುವುದು ಸಾಧ್ಯ ಇಲ್ಲ. ಇನ್ನು ಜೆಡಿಎಸ್, ಕೆಜೆಪಿ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಬಹುಮತದ ಹತ್ತಿರಕ್ಕೂ ಬರುವುದಿಲ್ಲ. ಕಾಂಗ್ರೆಸ್ ಎ ಟೀಮ್, ಕೆಜೆಪಿ ಅದರ ಬಿ ಟೀಮ್ ಅಷ್ಟೇ. ಅವರ ನಡುವೆ ಒಪ್ಪಂದವಾಗಿದೆ ಎಂದರು.

ಮುಖ್ಯಮಂತ್ರಿಯಾಗಿ ಒಂಬತ್ತು ತಿಂಗಳ ಅವಧಿಯಲ್ಲಿ 5 ವರ್ಷದ ಅನುಭವವಾಗಿದೆ. ಇಚ್ಛಾಶಕ್ತಿ ಇದ್ದರೆ ಉತ್ತಮ ಆಡಳಿತ ನೀಡಲು ಸಾಧ್ಯವಿದೆ ಎಂಬ ಅರಿವಾಗಿದೆ. ಕಪ್ಪುಚುಕ್ಕೆ ಇಲ್ಲದ, ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತವನ್ನು ನೀಡಿದ್ದೇನೆ. ನನ್ನ ಸರ್ಕಾರ 2-3 ತಿಂಗಳಿಗೆ ಬಿದ್ದುಹೋಗುತ್ತದೆ ಎನ್ನಲಾಗಿತ್ತು. ರಾಜೀನಾಮೆ ಕೊಡಿಸುವ ಮೂಲಕ ಅದರ ಪ್ರಯತ್ನಗಳೂ ನಡೆದಿದ್ದವು. ಆದರೆ, ಎಲ್ಲರೂ ನನ್ನೊಂದಿಗೆ ವಿಶ್ವಾಸದಿಂದಿದ್ದರು. ನಾನು ಹೇಳಿದ್ದಂತೆ ಬಜೆಟ್ ಮಂಡಿಸಿದೆ, ಸರ್ಕಾರ ಅವಧಿ ಪೂರೈಸುತ್ತಿದೆ ಎಂದರು.

ರಾಜ್ಯದ 22 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಇನ್ನೂ ಐದಾರು ಜಿಲ್ಲೆ ಪ್ರವಾಸ ಮಾಡಲಿದ್ದೇನೆ. ಕಳೆದ ಒಂದು ವಾರದಿಂದ ನಮ್ಮ ಅನುಭವಕ್ಕೆ ಬಂದಿರುವ ಸಂಗತಿ ಎಂದರೆ ರಾಜ್ಯದಲ್ಲಿ ಬಿಜೆಪಿ ಪರ ಗಾಳಿ ಬೀಸುತ್ತಿದೆ. ಇದರ ತೀವ್ರತೆ ಹೆಚ್ಚಾಗುತ್ತಿದೆ. ಜನರ ತೀರ್ಪು ನಮ್ಮ ಪರವಾಗಲಿದೆ. 125ರಿಂದ 130 ಸ್ಥಾನದಲ್ಲಿ ಜಯಗಳಿಸಿ ಸ್ಪಷ್ಟ ಬಹುಮತದ ಮತ್ತೆ ಸರ್ಕಾರ ರಚಿಸುತ್ತೇವೆ ಎಂದು ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

ತಮ್ಮ ಪ್ರಣಾಳಿಕೆ ಸೋರಿಕೆಯಾಗಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. ಪ್ರಣಾಳಿಕೆಯನ್ನೇ ಉಳಿಸಿಕೊಳ್ಳದ ಕಾಂಗ್ರೆಸ್ ಇನ್ನೆಂಥಾ ಸರ್ಕಾರ ನೀಡುತ್ತದೆ ಎಂದು ವ್ಯಂಗ್ಯವಾಡಿದರು. ಪಕ್ಷದ ರಾಷ್ಟ್ರೀಯ ವಕ್ತಾರರಾದ ನಿರ್ಮಲಾ ಸೀತಾರಾಂ ಈ ಸಂದರ್ಭದಲ್ಲಿ ಹಾಜರಿದ್ದರು.

ವೆಬ್ದುನಿಯಾವನ್ನು ಓದಿ