'ಭ್ರಷ್ಟ' ಬಿಎಸ್‌ವೈಗೆ ತಪ್ಪಿಸಿಕೊಳ್ಳೋದು ಹೇಗೆಂದು ಗೊತ್ತಾಗ್ಲಿಲ್ಲ: ರಮೇಶ್ ಕುಮಾರ್

ಗುರುವಾರ, 30 ಜನವರಿ 2014 (19:45 IST)
PR
PR
ಭ್ರಷ್ಟಾಚಾರ ಆರೋಪಗಳಿಂದ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಯಡಿಯೂರಪ್ಪನವರಿಗೆ ಪಾಪ ತಪ್ಪಿಸಿಕೊಳ್ಳುವುದು ಹೇಗೆಂದು ಗೊತ್ತಾಗಲಿಲ್ಲ ಎಂದು ಕಾಂಗ್ರೆಸ್ ಶಾಸಕ ಕೆ.ಆರ್. ರಮೇಶ್ ಕುಮಾರ್ ಹಾಸ್ಯಲೇಪಿತ ದನಿಯಲ್ಲಿ ಹೇಳಿದ್ದಾರೆ. ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮಾತನಾಡುತ್ತಿದ್ದ ರಮೇಶ್ ಕುಮಾರ್ ರಾಜ್ಯದಲ್ಲಿ ಬಿಜೆಪಿ ನಾಯಕರು ಮಾತ್ರ ಭ್ರಷ್ಟರಲ್ಲ.ಆದರೆ ಯಡಿಯೂರಪ್ಪನವರಿಗೆ ತಪ್ಪಿಸಿಕೊಳ್ಳುವುದು ಗೊತ್ತಾಗಲಿಲ್ಲ ಎಂದು ಹೇಳಿದರು. ಪಂಚತಾರಾ ಹೊಟೆಲ್‌ಗಳಲ್ಲಿ ಊಟ ಮಾಡುವಾಗ ಕಾಟನ್ ನ್ಯಾಪ್‌ಕಿನ್ ಬಳಸುತ್ತಾರೆ.

ತಮ್ಮ ಬಟ್ಟೆಗಳಿಗೆ ಒಂದು ಅಗುಳು ಅಂಟಿಕೊಳ್ಳದಂತೆ ನೋಡಿಕೊಳ್ತಾರೆ. ನಂತರ ಕೈತೊಳೆಯುವ ಬಟ್ಟಲಿನಲ್ಲಿ ಬೆರಳನ್ನು ಅದ್ದುತ್ತಾರೆ ಎಂದು ಕುಮಾರ್ ಹೇಳಿದರು. ವ್ಯಕ್ತಿ ಬುದ್ಧಿವಂತನಾಗಿದ್ದರೆ, ಹಣ ಅಪರಾತಪರಾ ಮಾಡುವಾಗ ಯಾವುದೇ ಸುಳಿವು ಬಿಡುವುದಿಲ್ಲ. ಆದರೆ ಯಡಿಯೂರಪ್ಪ ತಮ್ಮ ಬಟ್ಟೆಗಳನ್ನು ಕಲೆ ಮಾಡಿಕೊಂಡ್ರು. ದುಷ್ಕರ್ಮ ಮಾಡುವುದು ತಪ್ಪಲ್ಲ.

PR
PR
ಆದರೆ ಸಿಕ್ಕಿಹಾಕಿಕೊಳ್ಳದಂತೆ ತಪ್ಪಿಸಿಕೊಳ್ಳುವುದು ತಿಳಿದಿರಬೇಕು ಎಂದು ರಮೇಶ್ ಕುಮಾರ್ ಹೇಳಿದರು. ದುಷ್ಕಾರ್ಯ ಮಾಡಿದ ನಂತರ ಸಿಕ್ಕಿಬೀಳದಂತೆ ತಪ್ಪಿಸಿಕೊಳ್ಳುವ ಕೌಶಲತರಬೇತಿ ನೀಡುವ ಕಾಲೇಜನ್ನು ತೆರೆಯಲು ಸಿದ್ದರಾಮಯ್ಯ ಪರಿಶೀಲನೆ ನಡೆಸಬೇಕು ಎಂದು ರಮೇಶ್‌ಕುಮಾರ್ ಮಾರ್ಮಿಕವಾಗಿ ಹೇಳಿದರು. ರಮೇಶ್ ಕುಮಾರ್ ಹೇಳಿಕೆ ಹೇಗಿತ್ತೆಂದರೆ ಕಳ್ಳತನ ಮಾಡಿ, ಆದರೆ ಸಿಕ್ಕಿಬೀಳಬೇಡಿ ಎಂದು ಕಳ್ಳರಿಗೆ ಬುದ್ಧಿವಾದ ಹೇಳಿದಂತಿತ್ತು. ದೇವರಾಜ್ ಅರಸ್ ಮುಖ್ಯಮಂತ್ರಿಯಾದ ಕೂಡಲೇ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಆರೋಪ ಎದುರಿಸಿದರು.

ಆದರೆ ನಂತರ ಜನರು ಅವರ ವಿಗ್ರಹಗಳನ್ನು ಸ್ಥಾಪಿಸುವ ಮೂಲಕ ಪೂಜಿಸತೊಡಗಿದರು.ವೀರೇಂದ್ರ ಪಾಟೀಲ್ ವಿರುದ್ದ ಯಾವುದೇ ಭ್ರಷ್ಟಾಚಾರದ ಆರೋಪವಿರಲಿಲ್ಲ. ಆದರೆ ಆ ಕಾಲದಲ್ಲಿ ಭ್ರಷ್ಟಾಚಾರವಿರಲಿಲ್ಲವೆಂದಲ್ಲ ಎಂದರು. ನಂತರ ಕೋಲಾರದ ಕೆರೆಗಳ ವಿಚಾರವಾಗಿ ಮಾತನಾಡಿದ ಕುಮಾರ್, ರಾಜ್ಯಪಾಲರ ಮೂಲಕ ಸರ್ಕಾರ ಎಲ್ಲ ಕೆರೆಗಳನ್ನು ಪುನಶ್ಚೇತನಗೊಳಿಸಲಾಗುತ್ತಿದೆ ಎಂದು ಹೇಳಿಸಿದ್ದರು. ಆದರೆ ಯಾವ ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ. ಕೋಲಾರದಲ್ಲಿ ನೂರಾರು ಕೆರೆಗಳಿವೆ. ಯಾವುದಕ್ಕೂ ಪುನಶ್ಚೇತನದ ಕಾರ್ಯ ನಡೆದಿಲ್ಲ. ರಾಜ್ಯಪಾಲರ ಭಾಷಣ ದಾರಿತಪ್ಪಿಸುತ್ತಿದೆ. ಸರ್ಕಾರ ಇದಕ್ಕೆ ಉತ್ತರಿಸುತ್ತದೆಂದು ಭಾವಿಸಿದ್ದೇನೆ ಎಂದು ರಮೇಶ್ ಕುಮಾರ್ ಹೇಳಿದರು.

ವೆಬ್ದುನಿಯಾವನ್ನು ಓದಿ