ಮಡೆಸ್ನಾನ-ಪೋಷಕರನ್ನ ಹೇಗೆ ನಿಯಂತ್ರಿಸ್ತೀರಿ?: ಹೈಕೋರ್ಟ್

ಶನಿವಾರ, 17 ಮಾರ್ಚ್ 2012 (03:46 IST)
PR
ರಾಜ್ಯದ ಕೆಲ ದೇಗುಲಗಳಲ್ಲಿ ಜಾರಿಯಲ್ಲಿರುವ ಮಡೆಸ್ನಾನ ಪದ್ಧತಿಯಿಂದ ಮಕ್ಕಳನ್ನು ದೂರ ಇಡಬಹುದೇ ಹೊರತು ಪದ್ಧತಿಯಲ್ಲಿ ನಂಬಿಕೆ ಹೊಂದಿರುವ ಪೋಷಕರನ್ನು ನಿಯಂತ್ರಿಸುವುದು ಹೇಗೆ ಸಾಧ್ಯ ಎಂದು ಹೈಕೋರ್ಟ್ ಪ್ರಶ್ನಿಸಿದೆ.

ಮಡೆಸ್ನಾನ ಪದ್ಥತಿ ನಿಷೇಧ ಕೋರಿ ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸದ ಮುಖ್ಯ ನ್ಯಾ.ವಿ.ಜೆ.ಸೇನ್ ಮತ್ತು ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಸಂಪ್ರದಾಯಸ್ಥರು ಈ ಪದ್ಧತಿಯನ್ನು ಇಚ್ಛೆಪಟ್ಟು ಪಾಲಿಸುವಾಗ ಅದನ್ನು ನಿಷೇಧಿಸುವುದು ಹೇಗೆ ಎಂದು ಪ್ರಶ್ನಿಸಿತು.

ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಮಡೆಸ್ನಾನ ಪದ್ಧತಿ ಜಾರಿಯಲ್ಲಿದೆ. ಇದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದು ಮೇಲ್ಜಾತಿಯವರ ಎಂಜಲೆಲೆ ಮೇಲೆ ಕೆಳ ಜಾತಿಯವರು ಉರುಳಾಡುವ ಅನಿಷ್ಠ ಪದ್ಥತಿ. ರಾಜ್ಯದ ಮುಜರಾಯಿ ದೇಗುಲಗಳಲ್ಲಿ ಮಾತ್ರ ಈ ಪದ್ಧತಿ ಜಾರಿಯಲ್ಲಿದೆ. ಎಂಜಲೆಲೆ ಮೇಲೆ ಉರುಳಾಡುವವರಿಗೆ ಚರ್ಮರೋಗ, ಕ್ಷಯರೋಗ ಮತ್ತಿತರ ಕಾಯಿಲೆಗಳು ತಗುಲುವ ಸಾಧ್ಯತೆ ಇರುವುದರಿಂದ ಇದನ್ನು ನಿಷೇಧಿಸಬೇಕೆಂದು ಅರ್ಜಿದಾರರು ಕೋರಿದ್ದರು.

ವೆಬ್ದುನಿಯಾವನ್ನು ಓದಿ