ಮತದಾನ ಪ್ರಕ್ರಿಯೆಯಲ್ಲಿ ಗ್ರಾಮೀಣರದೇ ಮೇಲುಗೈ

ಸೋಮವಾರ, 6 ಮೇ 2013 (08:34 IST)
PR
PR
ಕೆಲವೆಡೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳಿಲ್ಲ ಎಂಬ ದೂರು, ಮತ್ತೆ ಕೆಲವೆಡೆ ಮತದಾನ ಬಹಿಷ್ಕಾರ ಇವುಗಳ ನಡುವೆಯೂ ರಾಜ್ಯದ 223 ವಿಧಾನಸಭಾ ಕ್ಷೇತ್ರಗಳಿಗೆ ಭಾನುವಾರ ನಡೆದ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಪ್ರಾಥಮಿಕ ವರದಿಗಳ ಪ್ರಕಾರ ರಾಜ್ಯಾದ್ಯಂತ ಮತದಾನದ ಪ್ರಮಾಣ ಈ ಬಾರಿಯೂ ಶೇಕಡಾ 60 ರ ಗಡಿ ದಾಟಿದೆ.

ಹವಾಮಾನ ವೈಪರೀತ್ಯ: ಮತಗಟ್ಟೆಗಳ ಮುಂದೆ ಮತದಾನ ಮಾಡಲು ಸಾಲುಗಟ್ಟಿ ನಿಂತಿದ್ದ ಉತ್ಸಾಹಿ ಮತದಾರರನ್ನು ಕಂಡಾಗ ಗುಲಬರ್ಗಾ, ರಾಯಚೂರು, ಬಳ್ಳಾರಿ, ಬಿಜಾಪುರ ಜಿಲ್ಲೆಗಳಲ್ಲಿ ಬಿಸಿಲಿನ ಝಳದ ಜೊತೆ ಜೊತೆಗೆ ಚುನಾವಣಾ ಕಾವೂ ಕಂಡು ಬಂದಿತು. ತುಮಕೂರು ಮತ್ತು ಹಾಸನದ ಕೆಲವೆಡೆಗಳಲ್ಲಿ ಮಳೆರಾಯ ಮತದಾನಕ್ಕೆ ಅಡ್ಡಿಪಡಿಸಿದ ಘಟನೆಯೂ ನಡೆಯಿತು ! ಇವೆಲ್ಲವನ್ನೂ ಎದುರಿಸಿದ ಮತದಾರ ಮತ ಚಲಾಯಿಸಿ ಅಭ್ಯರ್ಥಿಗಳ ಹಣೆ ಬರಹ ಬರೆದಿದ್ದಾನೆ!

ಜವಾಬ್ದಾರಿಯುತ ಮತದಾರ: ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡುವಲ್ಲಿ ನಗರ ಮತದಾರರಿಗಿಂತಲೂ ಎಂದಿನಂತೆ ಗ್ರಾಮೀಣ ಪ್ರದೇಶದ ಮತದಾರರು ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸಿದ್ದಾರೆ ಎಂಬುದು ಮತದಾನದ ಚಿತ್ರಣವನ್ನು ವಿಶ್ಲೇಷಿಸಿದಾಗ ತಿಳಿದು ಬರುತ್ತದೆ. ನಗರ ಪ್ರದೇಶಗಳಲ್ಲಿನ ಮತದಾರರನ್ನು ಮತಗಟ್ಟೆಗಳವರೆಗೆ ಕರೆತರಲು ಭಾರತೀಯ ಚುನಾವಣಾ ಆಯೋಗ ಹಮ್ಮಿಕೊಂಡ ವ್ಯವಸ್ಥಿತ ಮತದಾರರ ಶಿಕ್ಷಣ ಹಾಗೂ ಮತದಾನ ಪಾಲ್ಗೊಳ್ಳುವಿಕಾ ಕಾರ್ಯಕ್ರಮ ಹಾಗೂ ಮತದಾನದ ಅವಧಿ ವಿಸ್ತರಣೆ ಕುರಿತ ಕ್ರಮ ವಿಶೇಷವಾಗಿ ಬೆಂಗಳೂರು ನಗರದ ಪ್ರಜ್ಞಾವಂತ ಮತದಾರರ ಪ್ರಜ್ಞೆ ಮುಟ್ಟುವಲ್ಲಿ ಸಂಪೂರ್ಣ ಯಶಸ್ಸನ್ನು ಕಂಡಿದೆಯೇ ? ಎಂಬುದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 21 ಕ್ಷೇತ್ರಗಳ ಮತದಾನ ಅಂಕಿ-ಆಂಶ ವಿವರಗಳ ವಿಶ್ಲೇಷಣೆಯ ನಂತರ ತಿಳಿಯಲಿದೆ.

ಗಣ್ಯಾತಿಗಣ್ಯರು: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಹಾಗೂ ಹೆಚ್.ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿಗಳಾದ ಕೆ.ಎಸ್. ಈಶ್ವರಪ್ಪ ಹಾಗೂ ಆರ್. ಅಶೋಕ್, ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಸಚಿವ ಸಂಪುಟದ ಸದಸ್ಯರು ಹಾಲಿ ವಿಧಾನ ಸಭೆಯ ಸದಸ್ಯರು, ಚಿತ್ರ ನಟ ನಟಿಯರು, ಪೊಲೀಸ್ ಇಲಾಖೆಯ ಅಧಿಕಾರಿಗಳೂ ಸೇರಿದಂತೆ ಹಲವು ಗಣ್ಯರು ಚುನಾವಣಾ ಅಖಾಡದಲ್ಲಿದ್ದು ಜನತಾ ನ್ಯಾಯಾಲಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ಇದರ ಫಲಿತಾಂಶ ಮೇ 8 ರಂದು ಬಹಿರಂಗಗೊಳ್ಳಲಿದೆ.

ವೆಬ್ದುನಿಯಾವನ್ನು ಓದಿ