ಮತ್ತೊಂದು ಸಂಪುಟ ಸರ್ಜರಿಗೆ ಮುಂದಾದ ಯಡ್ಡಿ

ಭಾನುವಾರ, 31 ಅಕ್ಟೋಬರ್ 2010 (12:35 IST)
ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ತೀರ್ಪನ್ನು ಹೈಕೋರ್ಟ್ ಎತ್ತಿಹಿಡಿದ ಬೆನ್ನಲ್ಲೇ ರಾಜ್ಯ ಸರಕಾರದ ಸಂಪುಟ ವಿಸ್ತರಣೆಗೆ ಮುಂದಾಗಿದ್ದು, ನವೆಂಬರ್ 3ರಂದೇ ಮತ್ತೊಂದು ಸರ್ಜರಿ ನಡೆಯುವ ಸಾಧ್ಯತೆಯಿದೆ.

ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚಿಸಿ ಮುಂದಿನ ಒಂದೆರೆಡು ದಿನಗಳಲ್ಲಿ ತೀರ್ಮಾನ ಕೈಗೊಳ್ಳುವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗಷ್ಟೇ ನಡೆದ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಭುಗಿಲೆದ್ದ ಬಂಡಾಯವು ಸರಕಾರದ ಪತನಗೊಳಿಸುವ ಅಂಚಿಗೆ ತಲುಪಿತ್ತು. ಆದರೆ ಹಲವು ಕಸರತ್ತು ನಡೆಸಿದ್ದ ಯಡ್ಡಿ ಕೊನೆಗೂ ಸರಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರಲ್ಲದೆ ರಾಜ್ಯ ಇತಿಹಾಸದಲ್ಲೇ ಮೊದಲ ಬಾರಿಯೆಂಬಂತೆ ಎರಡೆರಡು ಬಾರಿ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚಿಸಿದ ಪ್ರಸಂಗವು ನಡೆದಿತ್ತು.

ನವೆಂಬರ್ ಮೂರರಂದು ಪಕ್ಷದ ಕಾರ್ಯಕಾರಿಣಿ ಸಭೆ ನಡೆಯಲಿದೆ. ಈ ಮಾತುಕತೆಯಲ್ಲಿ ಸ್ಪಷ್ಟ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.

ಖಾಲಿ ಇರುವ ಆರು ಸ್ಥಾನಗಳ ಭರ್ತಿ ಮಾಡಲು ಸರಕಾರ ಮುಂದಾಗಲಿದೆ. ಸರಕಾರದ ಇಕ್ಕಟ್ಟಿನ ಸಂದರ್ಭದಲ್ಲಿಯೂ ಪಕ್ಷಕ್ಕೆ ನಿಷ್ಠರಾಗಿ ಉಳಿದಿದ್ದ ಸಿ.ಟಿ. ರವಿ, ವರ್ತೂರ್ ಪ್ರಕಾಶ್, ಅಪ್ಪಚ್ಚು ರಂಜನ್, ಸೊಗಡು ಶಿವಣ್ಣ ಮತ್ತು ಅಪ್ಪುಪಟ್ಟಣ ಅವರು ಸಚಿವ ಸ್ಥಾನಕ್ಕೆ ಆಯ್ಕೆಯಾಗುವ ಸಾಧ್ಯತೆ ಕೇಳಿಬರುತ್ತಿವೆ.

ಅದೇ ಹೊತ್ತಿಗೆ ಸಚಿವ ಸ್ಥಾನಕ್ಕೆ ಒತ್ತಡ ಹೇರಬೇಡಿ ಎಂದು ಪಕ್ಷದ ಶಾಸಕರಿಗೆ ಸಿಎಂ ಮನವಿ ಮಾಡಿಕೊಂಡಿದ್ದಾರೆ. 11 ಮಂದಿ ಅನರ್ಹರ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದ ಯಡ್ಡಿ ಇದೀಗ ಸಂಪುಣ ವಿಸ್ತರಣೆಗೆ ಮುಂದಾಗಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ವೆಬ್ದುನಿಯಾವನ್ನು ಓದಿ