ಮತ್ತೆ ಸಿಎಂ ಗಾದಿಗೆ ಪಟ್ಟು?; ಯಡಿಯೂರಪ್ಪ- ನಿತಿನ್ ಗಡ್ಕರಿ ಚರ್ಚೆ

ಮಂಗಳವಾರ, 13 ಡಿಸೆಂಬರ್ 2011 (20:15 IST)
PR
ವಿಧಾನಮಂಡಲ ಕಲಾಪದ ನಡುವೆಯೇ ಬಿಜೆಪಿ ಹೈಕಮಾಂಡ್ ಬುಲಾವ್‌ ಮೇರೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ದೆಹಲಿಗೆ ದೌಡಾಯಿಸಿದ್ದು, ಸಂಜೆ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ರಾಜ್ಯದ ಲೋಕಸಭಾ ಸಂಸದರನ್ನು ಭೇಟಿಯಾಗಿ ಯಡಿಯೂರಪ್ಪ ಮಾತನಾಡಿದರು. ಜತೆಯಲ್ಲಿ ವಸತಿ ಸಚಿವ ಸೋಮಣ್ಣ ಕೂಡ ಸಾಥ್ ನೀಡಿದ್ದರು. ಈ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಶಿಕಾರಿಪುರದ ಸಾಮಾನ್ಯ ಶಾಸಕನಾಗಿ ಇಲ್ಲಿಗೆ ಬಂದಿದ್ದೇನೆ. ಈ ಭೇಟಿ ಯಾವುದೇ ರಾಜಕೀಯ ಉದ್ದೇಶದಿಂದ ಕೂಡಿಲ್ಲ ಎಂದರು.

ಯಾರೆನ್ನೆಲ್ಲಾ ಭೇಟಿಯಾಗುತ್ತೀರಾ ಎಂದು ತೂರಿ ಬಂದ ಪ್ರಶ್ನೆಗೆ, ಯಾರು ಸಿಗುತ್ತಾರೋ ಅವರನ್ನೆಲ್ಲ ಭೇಟಿಯಾಗಿ ಮಾತನಾಡುತ್ತೇನೆ ಎಂದು ಜಾಣತನದ ಉತ್ತರ ನೀಡಿದರು. ಸಮಯ ಸಿಕ್ಕಿದರೆ ಪಕ್ಷದ ವರಿಷ್ಠರನ್ನು ಕಂಡು ಮಾತನಾಡಿಸುವುದಾಗಿ ಹೇಳಿದರು.

ಕರ್ನಾಟಕ ಭವನದಲ್ಲಿ ಸಂಸದರ ಜತೆ ಔತಣಕೂಟದಲ್ಲಿ ಪಾಲ್ಗೊಂಡ ಯಡಿಯೂರಪ್ಪ ಸಂಜೆ ಪಕ್ಷದ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಒಂದೂವರೆ ಗಂಟೆ ಕಾಲ ಚರ್ಚೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿ ಸದಾನಂದ ಗೌಡರ ಗೆಲುವಿಗೆ ಸಹಕಾರ ನೀಡುವುದಲ್ಲದೆ, ಕೆಲವೇ ದಿನಗಳಲ್ಲಿ ತಾನೇ ಮತ್ತೆ ಮುಖ್ಯಮಂತ್ರಿ ಗಾದಿ ಏರುವ ಬಗ್ಗೆ ಚರ್ಚಿಸಿದ್ದಾರೆನ್ನಲಾಗಿದೆ. ನೆರೆಯ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಮೇಲೂ ಕೇಸ್ ದಾಖಲಾಗಿದೆ. ಆದರೂ ಅವರು ಮುಖ್ಯಮಂತ್ರಿ ಗಾದಿಯಲ್ಲಿದ್ದಾರೆ. ಹಾಗಾಗಿ ತಾನ್ಯಾಕೆ ಮುಖ್ಯಮಂತ್ರಿಪಟ್ಟ ಬಿಟ್ಟುಕೊಡಬೇಕು ಎಂಬ ದಾಳ ಉರುಳಿಸಿದ್ದಾರೆನ್ನಲಾಗಿದೆ. ಅಲ್ಲದೇ ತನಗೆ 80ಕ್ಕೂ ಅಧಿಕ ಶಾಸಕರ ಬೆಂಬಲ ಇರುವ ಬಗ್ಗೆಯೂ ಗಡ್ಕರಿಗೆ ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ