ಮಾಜಿ ಶಾಸಕ ಶಂಕರಲಿಂಗೇಗೌಡ ಇನ್ನಿಲ್ಲ

ಸೋಮವಾರ, 7 ಏಪ್ರಿಲ್ 2014 (11:31 IST)
PR
PR
ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಶಾಸಕ ಶಂಕರಲಿಂಗೇಗೌಡ ಚಿಕಿತ್ಸೆ ಫಲಿಸದೇ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಶಂಕರಲಿಂಗೇಗೌಡ ಅವರ ಅಂತಿಮದರ್ಶನ ಪಡೆಯಲು ಹಲವಾರು ಗಣ್ಯರು ಆಗಮಿಸಿದ್ದಾರೆ. ನಾಲ್ಕು ಅವಧಿಗೆ ಬಿಜೆಪಿ ಶಾಸಕರಾಗಿದ್ದ ಶಂಕರಲಿಂಗೇಗೌಡರು ಮಂಡ್ಯ ಜಿಲ್ಲೆಯ ಹೆಮ್ಮಿಗೆ ಗ್ರಾಮದಲ್ಲಿ ಜನಿಸಿದ್ದರು. ಅವರಿಗೆ 67 ವರ್ಷಗಳ ವಯಸ್ಸಾಗಿತ್ತು. ಅವರು ಪತ್ನಿ ನಾಗಲಕ್ಷ್ಮಿ, ಇಬ್ಬರು ಪುತ್ರಿಯರು ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಶಂಕರಲಿಂಗೇಗೌಡರು ಮೈಸೂರಿನ ಚಾಮರಾಜ ವಿಧಾನಸಭೆ ಕ್ಷೇತ್ರದಿಂದ ಸತತವಾಗಿ ನಾಲ್ಕು ಬಾರಿ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದರು.

ಕಾಂಗ್ರೆಸ್‌ನ ವಾಸು ಅವರಿಗೆ ಸೋತ ಬಳಿಕ ಸಾರ್ವಜನಿಕ ಜೀವನದಲ್ಲಿ ಹೆಚ್ಚಿಗೆ ಕಾಣಿಸಿಕೊಂಡಿರಲಿಲ್ಲ. ವರ್ಚಸ್ವಿ ವ್ಯಕ್ತಿತ್ವ ಹೊಂದಿದ್ದ ಶಂಕರಲಿಂಗೇಗೌಡರು ವಚನ ಸಾಹಿತ್ಯದಲ್ಲಿ ಪ್ರಭುತ್ವ ಹೊಂದಿದ್ದರು. ಆಗಿನ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಬಂಡಾಯ ಹೂಡಿದ್ದ ಅವರು ಕುಮಾರಸ್ವಾಮಿ ಜತೆ ನಂಟು ಹೊಂದಿದ್ದ ಬಂಡಾಯ ಬಿಜೆಪಿ ಸದಸ್ಯರ ಜೊತೆ ಗುರ್ತಿಸಿಕೊಂಡಿದ್ದರು.ಸಿದ್ದೇಗೌಡರ ಪುತ್ರರಾದ ಅವರು ಮೈಸೂರು ವಿವಿ ಬಿಎಸ್‌ಸಿ ಪದವಿ ಪಡೆದು ನಂತರ ಕಾನೂನು ವಿದ್ಯಾಭ್ಯಾಸ ಪೂರೈಸಿದ್ದರು.

1983ರಲ್ಲಿ ರಾಜಕೀಯ ಜೀವನಕ್ಕೆ ಕಾರ್ಪೊರೇಟರ್ ಹುದ್ದೆಯ ಮೂಲಕ ಕಾಲಿರಿಸಿದ ಅವರು 1988ರಲ್ಲಿ ಮೇಯರ್ ಹುದ್ದೆಗೇರಿದರು. 1994ರಲ್ಲಿ ಜನತಾದಳದ ಬಸವೇ ಗೌಡ ಅವರನ್ನು ಸೋಲಿಸಿ ಬಿಜೆಪಿ ಶಾಸಕರಾದರು. 1999, 2004 ಮತ್ತು 2008ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದರು. 2013ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಸೋಲನ್ನಪ್ಪಿದ್ದರು.

ವೆಬ್ದುನಿಯಾವನ್ನು ಓದಿ