ಮೈಸೂರು ಪೊಲೀಸರಿಂದ ವೀರಪ್ಪನ್ ಪತ್ನಿ ಸೆರೆ

ಬುಧವಾರ, 26 ನವೆಂಬರ್ 2008 (16:48 IST)
ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಚಾಮರಾಜನಗರ ಪೊಲೀಸರು ನರಹಂತಕ, ಕುಖ್ಯಾತ ದಂತಚೋರನಾಗಿದ್ದ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಹಾಗೂ ಮೂವರು ವೀರಪ್ಪನ್ ಬೆಂಬಲಿಗರನ್ನು ಬಂಧಿಸಿದ್ದಾರೆ.

ಕಳೆದ ರಾತ್ರಿ ತಮಿಳುನಾಡಿನ ಮೆಟ್ಟೂರಿನಲ್ಲಿರುವ ಮುತ್ತುಲಕ್ಷ್ಮಿ ನಿವಾಸಕ್ಕೆ ದಿಢೀರ್ ದಾಳಿ ನಡೆಸಿದ ಪೊಲೀಸರ ತಂಡ ಮುಂಜಾನೆ 5ಗಂಟೆ ಸುಮಾರಿಗೆ ಆಕೆಯನ್ನು ಬಂಧಿಸಿದ್ದು, ಬುಧವಾರ ಮಧ್ನಾಹ್ನ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

ಐದು ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಮುತ್ತುಲಕ್ಷ್ಮಿ 1992ರಿಂದ ತಲೆಮರೆಸಿಕೊಂಡಿದ್ದಳು, ಅಂದಿನಿಂದ ಮುತ್ತುಲಕ್ಷ್ಮಿ ಮತ್ತು ವೀರಪ್ಪನ್ ಸಹಚರರ ಬಂಧನಕ್ಕೆ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು.

ಮೆಟ್ಟೂರಿನಲ್ಲಿರುವ ಮುತ್ತುಲಕ್ಷ್ಮಿ ಬಂಧನದ ನಂತರ ತಮಿಳುನಾಡಿನ ಪೆರಿಯಂತಾಂಡಮ್ ಹಾಗೂ ಗೋಪಿನಾಥಮ್‌ನಲ್ಲಿ ದಾಳಿ ನಡೆಸಿದ ಪೊಲೀಸರು ಟೈಲರ್ ಬೋಸ್, ಟೈಲರ್ ಸೀನ ಮತ್ತು ಪೊನ್ನುಸ್ವಾಮಿ ಎಂಬುವರನ್ನು ಸೆರೆ ಹಿಡಿದಿದ್ದಾರೆ.

ನಾಲ್ಕು ಟಾಡಾ ಪ್ರಕರಣಗಳು ಮತ್ತು ಡಿಸಿಎಫ್ ಹತ್ಯೆ ಪ್ರಕರಣಗಳಲ್ಲಿ ಮುತ್ತುಲಕ್ಷ್ಮಿ ಭಾಗಿ ಎಂದು ಚಾಮರಾಜನಗರ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಅಲ್ಲದೇ ನ್ಯಾಯಾಲಯ ಮುತ್ತುಲಕ್ಷ್ಮಿ ವಿರುದ್ಧ ಜಾಮೀನುರಹಿತ ವಾರೆಂಟ್ ಹೊರಡಿಸಿತ್ತು.

ವೆಬ್ದುನಿಯಾವನ್ನು ಓದಿ