ಮೈಸೂರು: ಲಂಚ ಸ್ವೀಕರಿಸುತ್ತಿದ್ದಾಗ್ಲೇ ಡಿವೈಎಸ್ಪಿ ಲೋಕಾಯುಕ್ತ ಬಲೆಗೆ

ಭಾನುವಾರ, 18 ಸೆಪ್ಟಂಬರ್ 2011 (13:30 IST)
ಕಾರುಣ್ಯ ಟ್ರಸ್ಟ್ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆ ನಡೆಸಲು 25 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿಯೇ ಕುಶಾಲನಗರದ ಡಿವೈಎಸ್ಪಿ ಎಂ.ನಾರಾಯಣ ಅವರು ಮೈಸೂರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಕಾರುಣ್ಯ ಟ್ರಸ್ಟ್ ಭೂ ವಿವಾದ ಪ್ರಕರಣದ ಬಗ್ಗೆ ಸಾರ್ವಜನಿಕರು ಡಿವೈಎಸ್ಪಿ ನಾರಾಯಣ ಅವರಿಗೆ ದೂರು ಸಲ್ಲಿಸಿದ್ದರು. ಆದರೆ ಪ್ರಕರಣದ ಬಗ್ಗೆ ತನಿಖೆ ನಡೆಸುವ ಸಲುವಾಗಿ ನಾಲ್ಕು ಲಕ್ಷ ರೂಪಾಯಿ ಲಂಚ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಆ ಪೈಕಿ 25 ಸಾವಿರ ರೂಪಾಯಿ ಮುಂಗಡವಾಗಿ ನೀಡುವಂತೆ ಮಾತುಕತೆ ನಡೆಸಿದ್ದರು.

ಡಿವೈಎಸ್ಪಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ಮೊದಲೇ ಮಾಹಿತಿ ನೀಡಿ ಕಾರ್ಯಾಚರಣೆಗೆ ಇಳಿದಿದ್ದರು. ಆ ನಿಟ್ಟಿನಲ್ಲಿ ಭಾನುವಾರ ಬೆಳಿಗ್ಗೆ ಮೋಹನ್ ಎಂಬವರು 25 ಸಾವಿರ ನಗದು ಹಣ ತಂದಿದ್ದರು. ಡಿವೈಎಸ್ಪಿ ನಾರಾಯಣ ಅವರು ಪೊಲೀಸ್ ಸಮವಸ್ತ್ರದಲ್ಲೇ ಇಲಾಖೆಯ ಜೀಪಿನಲ್ಲಿ ಆಗಮಿಸಿ ಮೈಸೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲಿಯೇ ಕಾದು ಕುಳಿತಿದ್ದ ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಸೆರೆ ಹಿಡಿದಿದ್ದಾರೆ.

ಸಮವಸ್ತ್ರ ಹಾಗೂ ಇಲಾಖೆಯ ಜೀಪನ್ನು ಬಳಸಿ ಲಂಚದ ಹಣಕ್ಕೆ ಕೈಯೊಡ್ಡಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರಿಗೆ ಡಿವೈಎಸ್ಪಿಯೊಬ್ಬರು ಸೆರೆಸಿಕ್ಕಿರುವುದು ಇದೇ ಮೊದಲ ಪ್ರಕರಣವಾಗಿದೆ. ಹಾಗಾಗಿ ನಾರಾಯಣ್ ಜಾಮೀನು ರಹಿತ ಬಂಧನಕ್ಕೊಳಗಾಗಿದ್ದಾರೆ.

ವೆಬ್ದುನಿಯಾವನ್ನು ಓದಿ