ಯಡಿಯೂರಪ್ಪಗೆ ಜೈಲಲ್ಲೇ ರಾಜ್ಯೋತ್ಸವ; ನ.2ಕ್ಕೆ ಜಾಮೀನು ವಿಚಾರಣೆ

ಸೋಮವಾರ, 31 ಅಕ್ಟೋಬರ್ 2011 (16:40 IST)
ಡಿನೋಟಿಫಿಕೇಷನ್ ಹಗರಣದಲ್ಲಿ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್‌ನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ನವೆಂಬರ್ 2ಕ್ಕೆ ಮುಂದೂಡಿದ್ದು, ಬಿಎಸ್‌ವೈ ಹಾಗೂ ಶೆಟ್ಟಿ ಈ ಬಾರಿಯ ರಾಜ್ಯೋತ್ಸವವನ್ನು ಜೈಲಲ್ಲೇ ಆಚರಿಸುವಂತಾಗಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಡಿನೋಟಿಫಿಕೇಷನ್ ಪ್ರಕರಣದ ಸಂಬಂಧ ಯಡಿಯೂರಪ್ಪನವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಅಕ್ಟೋಬರ್ 29ರಂದು ಅ.31ಕ್ಕೆ ಮುಂದೂಡಿತ್ತು. ಸಿರಾಜಿನ್ ಬಾಷಾ ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ದಾಖಲಿಸಿರುವ 2 ಮತ್ತು 3ನೇ ದೂರಿಗೆ ಸಂಬಂಧಿಸಿದಂತೆ ಯಡಿಯೂರಪ್ಪ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.

ಏತನ್ಮಧ್ಯೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರಭಾವಿಯಾಗಿದ್ದು, ಅವರಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಸಿರಾಜಿನ್ ಬಾಷಾ ಪರ ವಕೀಲ ಸಿ.ಎಚ್.ಹನುಮಂತರಾಯ ವಾದಿಸಿದ್ದರು. ಆದರೆ ಪ್ರಕರಣದ ಪ್ರತಿವಾದ ಬಾಕಿ ಉಳಿದಿರುವುದರಿಂದ ಹೈಕೋರ್ಟ್ ವಿಚಾರಣೆಯನ್ನು ನವೆಂಬರ್ 2ಕ್ಕೆ ಮುಂದೂಡಿದೆ.

ಕೃಷ್ಣಯ್ಯ ಶೆಟ್ಟಿಗೂ ಜೈಲಲ್ಲೇ ರಾಜ್ಯೋತ್ಸವ;
ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಮಾಜಿ ಸಚಿವ, ಶಾಸಕ ಕೃಷ್ಣಯ್ಯ ಶೆಟ್ಟಿ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ನವೆಂಬರ್ 2ಕ್ಕೆ ಮುಂದೂಡಿದ್ದು, ಕೃಷ್ಣಯ್ಯ ಶೆಟ್ಟಿಯವರೂ ಕೂಡ ರಾಜ್ಯೋತ್ಸವವನ್ನು ಜೈಲಿನಲ್ಲೇ ಆಚರಿಸುವಂತಾಗಿದೆ.

ಬಿಎಸ್‌ವೈ ಪುತ್ರರ ಜಾಮೀನು ಷರತ್ತಿಗೆ ನೀಡಿದ್ದ ವಿನಾಯಿತಿ ವಿಸ್ತರಣೆ:
ಡಿನೋಟಿಫಿಕೇಷನ್ ಪ್ರಕರಣದ ಕುರಿತಂತೆ ಯಡಿಯೂರಪ್ಪನವರ ಪುತ್ರರ ಜಾಮೀನು ಷರತ್ತಿಗೆ ನೀಡಿದ್ದ ವಿನಾಯ್ತಿಯನ್ನು ಮತ್ತೆ ಎರಡು ವಾರಗಳ ಕಾಲ ಹೈಕೋರ್ಟ್ ಏಕಸದಸ್ಯ ಪೀಠ ವಿಸ್ತರಿಸಿದೆ.

ವೆಬ್ದುನಿಯಾವನ್ನು ಓದಿ