ಯಡಿಯೂರಪ್ಪ ಬಾಯಿ ಬಿಗಿ ಹಿಡಿದು ಮಾತಾಡಲಿ: ದೇವೇಗೌಡ

ಗುರುವಾರ, 30 ಏಪ್ರಿಲ್ 2009 (15:21 IST)
ಚನ್ನರಾಯಪಟ್ಟಣದಲ್ಲಿ ಚಪ್ಪಲಿ ಎಸೆದಿದ್ದ ಪ್ರಕರಣಕ್ಕೆ ದೇವೇಗೌಡ ಕುಟುಂಬವೇ ಕಾರಣ ಎಂಬ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಪವನ್ನು ಮಾಜಿ ಪ್ರಧಾನಿ ದೇವೇಗೌಡರು ತೀಕ್ಷ್ಣವಾದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಾನು ರಾಜಕೀಯ ಜೀವನ ಆರಂಭಿಸಿದಾಗ ಯಡಿಯೂರಪ್ಪ ಹುಟ್ಟಿದ್ದರೋ ಇಲ್ಲವೋ ಗೊತ್ತಿಲ್ಲ. ರಾಜಕೀಯದಲ್ಲಿ ಸಭ್ಯತೆಯಿಂದಿರಬೇಕು ಎಂಬುದು ಗೊತ್ತಿಲ್ಲ. ಉನ್ನತ ಹುದ್ದೆಯಲ್ಲಿರುವವರು ಹದ್ದು ಮೀರಿ ಮಾತನಾಡಬಾರದೆಂಬ ಪರಿಜ್ಞಾನವೂ ಅವರಿಗೆ ಗೊತ್ತಿಲ್ಲ ಎಂದು ದೇವೇಗೌಡರು ಕಿಡಿಕಾರಿದ್ದಾರೆ.

ಯಾರೋ ಒಬ್ಬ ಚಪ್ಪಲಿ ಎಸೆಯುತ್ತಾನೆಂದರೆ ಅದಕ್ಕೆಲ್ಲಾ ನಾವು ಹೊಣೆಗಾರರೇ? ಯಾರೋ ಚಪ್ಪಲಿ ಎಸೆಯುತ್ತಾನೆಂದು ನಾವು ಕಾದು ಕೂರಬೇಕಾ? ಮುಖ್ಯಮಂತ್ರಿಗೆ ಅಷ್ಟು ಕನಿಷ್ಠ ಜ್ಞಾನವಾದರು ಬೇಡವೇ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಎಚ್.ಡಿ.ರೇವಣ್ಣ, ಯಡಿಯೂರಪ್ಪಗೆ ನಿಜವಾದ ರಾಜಕಾರಣ ಗೊತ್ತಿಲ್ಲ. ಹಿಂಬಾಗಿಲಿನಿಂದ ರಾಜಕಾರಣ ಮಾಡುವವರು ನಡೆದುಕೊಳ್ಳುವವರಂತೆ ಮಾತನಾಡುತ್ತಿದ್ದಾರೆ. ಚನ್ನರಾಯಪಟ್ಟಣದಲ್ಲಿ ಚಪ್ಪಲಿ ಎಸೆದ ಪ್ರಕರಣಕ್ಕೂ, ದೇವೇಗೌಡ ಕುಟುಂಬಕ್ಕೂ ಸಂಬಂಧ ಕಲ್ಪಿಸುವುದು ನ್ಯಾಯವಲ್ಲ.

ಚಪ್ಪಲಿ ಎಸೆಯಲು ಕುಮ್ಮಕ್ಕು ನೀಡುವಂತಹ ಕೀಳುಮಟ್ಟದ ರಾಜಕಾರಣವನ್ನು ನಾವು ಮಾಡುವುದಿಲ್ಲ ಎಂದರು. ಹಾಗೂ ಜೂನ್ 1 ರ ನಂತರ ಯಡಿಯೂರಪ್ಪ ಸರ್ಕಾರ ರಾಜ್ಯದಲ್ಲಿ ಇರುವುದಿಲ್ಲ ಎಂದು ಅವರು ಭವಿಷ್ಯ ನುಡಿದರು.

ವೆಬ್ದುನಿಯಾವನ್ನು ಓದಿ