ಯಡ್ಡಿ ಬಿಜೆಪಿಗೆ ಸೇರ್ಪಡೆಯಾದ್ರೆ ಎರಡು ಸ್ಥಾನಗಳ ಲಾಭವಾಗಬಹುದು: ದೇವೇಗೌಡ ಲೇವಡಿ

ಬುಧವಾರ, 11 ಡಿಸೆಂಬರ್ 2013 (14:42 IST)
PR
ಯಡಿಯೂರಪ್ಪ ಮರಳಿದರೆ ಬಿಜೆಪಿಗೆ ಎರಡೂ-ಮೂರು ಸ್ಥಾನಗಳ ಲಾಭವಾಗಬಹುದು. ಆದರೆ 28 ಸ್ಥಾನ ದಕ್ಕುವುದಿಲ್ಲ ಎಂದು ಮಾಜಿ ಪ್ರಧಾನಿ ಜೆಡಿಎಸ್ ಮುಖ್ಯಸ್ಥ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ತನ್ನ ಧೋರಣೆಯನ್ನು ತಿದ್ದಿಕೊಂಡು ಜನಪರವಾಗಿ ಕೆಲಸ ಮಾಡಲಿ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಸಫ‌ರ್‌ಜಂಗ್‌ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌಡರು, ಸರ್ಕಾರದ ಸಚಿವರ ವಿರುದ್ಧ ರಾಜ್ಯಪಾಲರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವರು ಕಚೇರಿಗೆ ಸರಿಯಾಗಿ ಬರುತ್ತಿಲ್ಲ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ, ಸಮನ್ವಯ ಸಮಿತಿ ಸಭೆ ನಡೆದಿದ್ದರೂ ಯಾವುದೆ ಫ‌ಲಿತಾಂಶ ಬಂದಿಲ್ಲ, ಸರ್ಕಾರ ತನ್ನ ಧೋರಣೆಯನ್ನು ತಿದ್ದಿಕೊಳ್ಳಬೇಕು ಎಂದು ದೇವೇಗೌಡ ಸಲಹೆ ನೀಡಿದ್ದಾರೆ.


ಒಬ್ಬ ನಾಯಕನಿಗೆ ಏನೂ ಶಕ್ತಿಯಿಲ್ಲ ಎಂದು ಹೇಳುವುದು ಸರಿಯಲ್ಲ, ಕಾಂಗ್ರೆಸ್‌ ಮುಖಂಡರ ಧಾಟಿಯಲ್ಲಿ ತಾವು ಮಾತನಾಡುವುದಿಲ್ಲ. ಯಡಿಯೂರಪ್ಪ ಮರಳಿದರೆ ಬಿಜೆಪಿಗೆ ಎರಡೂ-ಮೂರು ಸ್ಥಾನಗಳ ಲಾಭವಾಗಬಹುದು. ಆದರೆ 28 ಸ್ಥಾನ ದಕ್ಕುವುದಿಲ್ಲ. ಮತದಾರರು ಬುದ್ಧಿವಂತರಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷದ ಗೆಲುವಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೇಜ್ರಿವಾಲ್‌ ರಾಜಕೀಯ ಪರಿಣತ ಎಂದು ಹೇಳುವುದಿಲ್ಲ, ಆದರೆ ಅವರಲ್ಲಿ ಹೊಸ ನಾಯಕತ್ವವಿದೆ. ಕಾಂಗ್ರೆಸ್‌, ಬಿಜೆಪಿಗೆ ಪರ್ಯಾಯ ವ್ಯವಸ್ಥೆ ಇದ್ದರೆ, ರಾಜ್ಯಗಳಲ್ಲಿ ಈ ಪರ್ಯಾಯ ಶಕ್ತಿಗಳು ಒಂದುಗೂಡಿ, ಈ ಪಕ್ಷಗಳ ಕಾರ್ಯಕ್ರಮಕ್ಕೆ ಹೊರತಾದ ಅಂಶಗಳನ್ನು ಇಟ್ಟುಕೊಂಡರೆ ಯಶ ಗಳಿಸಬಹುದು ಎಂದು ಗೌಡರು ಅಭಿಪ್ರಾಯಪಟ್ಟರು.

ವೆಬ್ದುನಿಯಾವನ್ನು ಓದಿ