ರಾಜಕಾರಣದಲ್ಲಿ ಪಕ್ಷಾಂತರ ಹೊಸದಲ್ಲ: ಜಿ.ಪರಮೇಶ್ವರ್

ಶನಿವಾರ, 17 ಆಗಸ್ಟ್ 2013 (10:38 IST)
PTI
ರಾಷ್ಟ್ರ ಹಾಗೂ ರಾಜ್ಯಕಾರಣದಲ್ಲಿ ಪಕ್ಷಾಂತರ ಹೊಸದಲ್ಲ. ಈ ಚುನಾವಣೆಯಲ್ಲಷ್ಟೇ ಏಕೆ, ಈ ಹಿಂದೆಯೂ ಪಕ್ಷಾಂತರ ಪ್ರಕ್ರಿಯೆ ನಡೆದಿದೆ. ತಾವು ಒಪ್ಪಿದ ಸೈದ್ಧಾಂತಿಕ ನಿಲುವಿನಲ್ಲಿ ವ್ಯತ್ಯಾಸ ಬಂದಾಗ ಇಂಥದ್ದು ಸಹಜ. ದೊಡ್ಡ ದೊಡ್ಡ ನಾಯಕರೇ ಪಕ್ಷಾಂತರ ಮಾಡಿದ್ದಾರೆ. ಅದು ಈಗ ರಾಜ್ಯದಲ್ಲಿ ಆರಂಭವಾಗಿದೆ. ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿದ್ದಾರೆ.

ಜಾತ್ಯತೀತ ಜನತಾ ದಳದ ನಿಲುವು ಮತ್ತು ಸೈದ್ಧಾಂತಿಕ ಹೊಂದಾಣಿಕೆಯಿಂದ ಬೇಸತ್ತು ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ ಎಂದು ಹಲವಾರು ನಾಯಕರು ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ. ಅವರು ಬಿಜೆಪಿಯನ್ನು ಕೋಮುವಾದಿ ಎನ್ನುತ್ತಿದ್ದರು. ಆದರೂ ಆಕಸ್ಮಿಕವಾಗಿ ಬಿಜೆಪಿ ಜತೆ ಸರ್ಕಾರ ಮಾಡುವುದನ್ನು ಒಪ್ಪಿದ್ದರು. ಆದರೆ ಈಗ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಪ್ರಬಲ ಕಾರಣ ಎಲ್ಲಿದೆ.

ಹೀಗಾಗಿ ನಿಜಾರ್ಥದಲ್ಲಿ ಜಾತ್ಯತೀತ ಸಿದ್ಧಾಂತ ಪಾಲಿಸುವ ಕಾಂಗ್ರೆಸ್ನ್ನು ಸೇರುತ್ತಿದ್ದಾರೆ. ಅನ್ಯ ಪಕ್ಷದವರನ್ನು ಸೇರಿಸಿಕೊಂಡಿರುವುದರಿಂದ ಕಾಂಗ್ರೆಸ್ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ ಜೆಡಿಎಸ್ನ ಜಾತ್ಯತೀತ ಪರಿಕಲ್ಪನೆ ಹೊರಬಿದ್ದಿದೆ. ಅಲ್ಲಿ ಸಿದ್ದಾಂತಕ್ಕಿಂತ ಸ್ವಾರ್ಥಕ್ಕೆ ಮಾತ್ರ ಬೆಲೆ.

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಪರೇಷನ್ ಕಮಲ ಎಂಬ ಕೆಟ್ಟ ಬೆಳವಣಿಗೆ ನಡೆದಿದ್ದು. ಅನ್ಯಪಕ್ಷದ ಶಾಸಕರಿಗೆ ಅಧಿಕಾರದ ಆಸೆ ತೋರಿಸಿ ಅವರಿಂದ ರಾಜಿನಾಮೆ ಕೊಡಿಸಿ ಚುನಾವಣೆ ಎದುರಾಗುವಂತೆ ಮಾಡುತ್ತಿದ್ದರು. ಈ ಅನೈತಿಕ ಬೆಳವಣಿಗೆಗೂ ಅನ್ಯ ಪಕ್ಷದ ಮುಖಂಡರು ಕಾಂಗ್ರೆಸ್ಗೆ ಸೇರುವುದಕ್ಕೂ ಹೋಲಿಕೆ ಮಾಡುವುದು ಸರಿಯಲ್ಲ.

ನಾವು ಯಾರಿಗೂ ಅಧಿಕಾರದ ಆಸೆ ತೋರಿಸಿಲ್ಲ. ಜೆಡಿಎಸ್ ಹಾಗೂ ಬಿಜೆಪಿಯಲ್ಲಿನ ಬೆಳವಣಿಗೆಯಿಂದ ಬೇಸತ್ತು ಕಾಂಗ್ರೆಸ್ ಸೇರುತ್ತಿದ್ದಾರೆ. ಹಾಗಂತ ನಾವು ಮನಸಿಗೆ ಬಂದಂತೆ ಪಕ್ಷದ ಬಾಗಿಲು ತೆರೆದಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ಯಾರೇ ಪಕ್ಷ ಸೇರಬೇಕಿದ್ದರೂ ಹೈಕಮಾಂಡ್ ಅನುಮತಿ ಬೇಕಾಗುತ್ತದೆ ಎಂದು ಜಿ.ಪರಮೇಶ್ವರ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ