ರಾಜ್ಯದಲ್ಲಿ ಪಬ್ ಸಂಸ್ಕೃತಿಗೆ ಅವಕಾಶ ಇಲ್ಲ: ಯಡಿಯೂರಪ್ಪ

ಗುರುವಾರ, 29 ಜನವರಿ 2009 (15:13 IST)
NRB
ಪಬ್ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆಯನ್ನು ನಿಷೇಧಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯದಲ್ಲಿ ಪಬ್ ಸಂಸ್ಕೃತಿಗೆ ಅವಕಾಶ ನೀಡುವುದಿಲ್ಲ ಎಂಬುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ಕಳೆದ ವಾರ ಮಂಗಳೂರಿನ ಎಮ್ನೇಶಿಯ ಪಬ್ ದಾಳಿ ಸಂದರ್ಭದಲ್ಲಿ, ಶ್ರೀರಾಮಸೇನೆ ಕಾರ್ಯಕರ್ತರು ಯುವತಿಯರ ಮೇಲೆ ನಡೆಸಿದ ಹಲ್ಲೆ ಘಟನೆ ದುರದೃಷ್ಟಕರ ಎಂದು ಖೇದ ವ್ಯಕ್ತಪಡಿಸಿರುವ ಅವರು, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಪಬ್ ಸಂಸ್ಕೃತಿಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

ಏನೇ ಇರಲಿ, ರಾಜ್ಯದಲ್ಲಿ ಮತ್ತೆ ಅಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸುತ್ತೇವೆ. ಅಲ್ಲದೇ ಯಾರೇ ಆಗಲಿ ಕಾನೂನನ್ನು ಕೈಗೆತ್ತಿಕೊಳ್ಳುವುದನ್ನು ಸಹಿಸಲಾಗುವುದಿಲ್ಲ. ಘಟನೆ ಕುರಿತಂತೆ ಶೀಘ್ರವೇ ಕ್ರಮ ಕೈಗೊಂಡಿದ್ದೇವೆ. ಇದೀಗ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಹೇಳಿದರು.

ಭಾರತೀಯ ಜನತಾ ಪಕ್ಷಕ್ಕೂ, ಶ್ರೀರಾಮಸೇನೆಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿಗಳು, ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಬಳಸುವ ಬಗ್ಗೆಯೂ ಆಲೋಚನೆ ನಡೆಸಲಾಗುತ್ತಿದೆ ಎಂದರು.

ಪಬ್ ದಾಳಿಯ ಕುರಿತಂತೆ ಶ್ರೀರಾಮಸೇನೆಯ ವರಿಷ್ಠ ಪ್ರಮೋದ್ ಮುತಾಲಿಕ್ ಸೇರಿದಂತೆ 33ಮಂದಿಯನ್ನು ಬಂಧಿಸಿದ್ದು, ಆರೋಪಿತರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮಕೈಗೊಳ್ಳಲಿದೆ ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು.

ವೆಬ್ದುನಿಯಾವನ್ನು ಓದಿ