ರಾಜ್ಯದ ಜನತೆಗೆ ಅಮೃತ ಕೊಟ್ಟು, ನಾನು ವಿಷ ಕುಡಿದೆ: ಯಡಿಯೂರಪ್ಪ

ಸೋಮವಾರ, 14 ನವೆಂಬರ್ 2011 (16:42 IST)
ಜನರ ಅಭೂತಪೂರ್ವ ಬೆಂಬಲದಿಂದ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ಹಾಗಾಗಿ ಬದುಕಿರುವವರೆಗೂ ರಾಜ್ಯದ ಜನತೆಗೆ ಚಿರಋಣಿಯಾಗಿರುತ್ತೇನೆ. ನಾನು ಯಾವುದೇ ತಪ್ಪು ಮಾಡದಿದ್ದರೂ 24 ದಿನ ಜೈಲುಶಿಕ್ಷೆ ಅನುಭವಿಸಿದೆ. ರಾಜ್ಯದ ಜನತೆಗೆ ಅಮೃತ ಕುಡಿಸುವ ಕೆಲಸ ಮಾಡಿದೆ. ಆದರೆ ವಿಷ ಕುಡಿಯುವ ಸಂದರ್ಭ ಬಂದಾಗ ಎಲ್ಲರೂ ನನ್ನಿಂದ ದೂರವಾದರು ಹಾಗೆ ನಾನೇ ಕುಡಿದು ವಿಷಕಂಠನಾದೆ...ಹೀಗೆ ಸಮುದ್ರಮಥನ ಕಥೆ ಮೂಲಕ ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸಂದರ್ಭ ಸೋಮವಾರ ಹುಟ್ಟೂರು ಶಿಕಾರಿಪುರದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಯಡಿಯೂರಪ್ಪ ಮಾತನಾಡಿದರು.

ನಾನು ಯಾವುದೇ ತಪ್ಪು ಮಾಡದಿದ್ದರೂ ನನ್ನ ಜೈಲಿಗೆ ಕಳುಹಿಸುವ ವ್ಯವಸ್ಥಿತ ಸಂಚು ನಡೆಸಲಾಗಿತ್ತು. ಹಾಗಾಗಿ ನನ್ನ ಸ್ಥಿತಿ ಬಗ್ಗೆ ಕಣ್ಣೀರು ಹಾಕಬಾರದೆಂದು ಮನೆಯವರಿಗೂ ಎಚ್ಚರಿಕೆ ಕೊಟ್ಟಿದ್ದೆ. ನಾಯಕರು, ಕಾರ್ಯಕರ್ತರು ಎದೆಗುಂದಬಾರದೆಂದು ಹೊರಗಡೆ ನಾನು ಕಣ್ಣೀರು ಹಾಕಿಲ್ಲ. ಆದರೆ ಮನೆಯಲ್ಲೇ ಮಕ್ಕಳು, ಮೊಮ್ಮಕ್ಕಳೊಡನೆ ಬೆಳಗಾಗುವವರೆಗೂ ಕಣ್ಣೀರು ಹಾಕಿದ್ದೆ ಎಂದರು.

ನನಗಾಗಿ ಲಕ್ಷಾಂತರ ಜನರು ದೀಪಾವಳಿ ಆಚರಿಸಲಿಲ್ಲ. ನನ್ನ ಬಿಡುಗಡೆಗಾಗಿ ಹೋಮ, ಹವನ ನಡೆಸಿ ಪೂಜೆ ಸಲ್ಲಿಸಿದ್ದರು. ನಾನು ರಾಜ್ಯದ ಜನತೆಗೆ ಆಭಾರಿಯಾಗಿದ್ದೇನೆ. ನನ್ನ ವಿರುದ್ಧ ಸುಳ್ಳು ಕೇಸ್ ಹಾಕಿದವರೇ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ಹೇಳಿದರು. ನನ್ನ ಬಲಿಪಶು ಮಾಡಲು ಎಲ್ಲರೂ ಸಂಚು ನಡೆಸಿದ್ದಾರೆ. ಆದರೆ ಶರಣಾಗುವುದು, ಬಗ್ಗುವುದು, ಜಗ್ಗುವುದು ಈ ಶಬ್ದ ಯಡಿಯೂರಪ್ಪನ ಡಿಕ್ಷನರಿಯಲ್ಲೇ ಇಲ್ಲ ಎಂದು ತಿರುಗೇಟು ನೀಡಿದರು.

ಶರಣಾಗುವುದನ್ನು ನನ್ನ ತಂದೆ ನನಗೆ ಕಲಿಸಿಕೊಟ್ಟಿಲ್ಲ. 70 ಜನ ಶಾಸಕರ ಬೆಂಬಲವಿದ್ರೂ ರಾಜೀನಾಮೆ ಕೊಟ್ಟಿದ್ದೇನೆ. ರಾಜ್ಯದ ಜನತೆಗಾಗಿ ನಾನೇ ಸಂಕಷ್ಟ ಎದುರಿಸಿದ್ದೇನೆ. ನಿಮ್ಮ ಆಶೀರ್ವಾದ ಇದ್ದರೆ ಮುಂದೆ ಮತ್ತೆ ನಿಮ್ಮ ಸೇವೆ ಮಾಡುತ್ತೇನೆ ಎಂದರು.

ನಾನು ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲ. ನನಗೆ ಜೀವ ಕೊಟ್ಟಿರುವುದೇ ಬಿಜೆಪಿ. ಆ ನಿಟ್ಟಿನಲ್ಲಿ ವಿಪಕ್ಷಗಳು ರಾಜ್ಯ ಸರ್ಕಾರ ಬೀಳುತ್ತೇ ಅಂತ ಕಾಯುವುದು ಬೇಡ ಎಂದು ಸಲಹೆ ನೀಡಿ, ಸಿದ್ದರಾಮಯ್ಯ ಮತ್ತು ಪರಮೇಶ್ವರ್ ವಿರುದ್ಧ ಟೀಕಾಪ್ರಹಾರ ನಡೆಸಿದರು. ನನಗೆ ಯಾವುದೇ ಅಧಿಕಾರ ಬೇಡ, ಎಲ್ಲವನ್ನೂ ಸಂಯಮದಿಂದ ನೋಡುತ್ತಿರುವೆ. ನಾನು ಇನ್ನೂ 18-20 ವರ್ಷ ರಾಜಕಾರಣ ಮಾಡುತ್ತೇನೆ. ವಯಸ್ಸಾದ್ರೂ ತೊಂದರೆ ಇಲ್ಲ, ಕೋಲೂರಿಕೊಂಡಾದ್ರೂ ರಾಜ್ಯವನ್ನು ಅಭಿವೃದ್ಧಿ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೆಗ್ಡೆ ವಿರುದ್ಧ ವಾಗ್ದಾಳಿ:
ಲೋಕಾಯುಕ್ತ ಸಂಸ್ಥೆಯಲ್ಲೇ ಭ್ರಷ್ಟರಿದ್ದಾರೆ ಎಂದು ಸ್ವತ ಸಂತೋಷ್ ಹೆಗ್ಡೆಯವರೇ ಒಪ್ಪಿಕೊಂಡಿದ್ದಾರೆ. ಹಾಗಿದ್ದ ಮೇಲೆ ನಿಮಗೆ ನಿಮ್ಮ ಸಂಸ್ಥೆಯನ್ನೇ ಕ್ಲೀನ್ ಮಾಡಲು ಆಗಿಲ್ಲ ಎಂದ ಮೇಲೆ ರಾಜ್ಯವನ್ನೇನು ಕ್ಲೀನ್ ಮಾಡುತ್ತೀರಾ ಎಂದು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆಯವರ ವಿರುದ್ಧ ಯಡಿಯೂರಪ್ಪ ನೇರ ವಾಗ್ದಾಳಿ ನಡೆಸಿದರು.

ನೀವು ಸದಾ ವಿಧಾನಸೌಧವನ್ನೇ ಟೀಕಿಸುತ್ತಿದ್ದೀರಿ. ಆದರೆ ನಿಮಗೆ ನಿಮ್ಮ ಸಂಸ್ಥೆಯಲ್ಲಿನ ಹುಳುಕು ಸ್ವಚ್ಛ ಮಾಡಲು ಯಾಕೆ ಆಗಿಲ್ಲ. ಲೋಕಾಯುಕ್ತರಾಗಿದ್ದ ಮಧುಕರ ಶೆಟ್ಟಿವರ ಪ್ರಶ್ನೆಗೆ ನೀವು ಯಾಕೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಪ್ರಶ್ನಿಸಿರುವ ಯಡಿಯೂರಪ್ಪ, ನೀವು ನೀಡಿರುವ ಲೋಕಾಯುಕ್ತ ವರದಿ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ಸದ್ಯದಲ್ಲೇ ಬಹಿರಂಗಪಡಿಸುತ್ತೇನೆ ಎಂದರು.

ನೀವು ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ಕೆಲಸ ಮಾಡಿದವರು. ನೀವು ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕಿತ್ತು. ಅದನ್ನು ಬಿಟ್ಟು ನೀವು ಯಾರದ್ದೊ ಕೈಗೊಂಬೆಯಂತೆ ವರ್ತಿಸಿ ನನ್ನ ಬಲಿಪಶು ಮಾಡಿದಿರಿ ಎಂದು ಕಿಡಿಕಾರಿದರು.

ವೆಬ್ದುನಿಯಾವನ್ನು ಓದಿ