ರಾಜ್ಯಾದ್ಯಂತ ಸಂಭ್ರಮದ ರಂಗಿನಾಟ

ರಾಜ್ಯದೆಲ್ಲಡೆ ಸಂಭ್ರಮದ ಹೋಳಿ ಆಚರಣೆ ನಡೆದಿದೆ. ಮಕ್ಕಳು-ದೊಡ್ಡವರೆನ್ನುವ ಭೇದಭಾವವಿಲ್ಲದೆ ಬಣ್ಣದ ಪುಡಿ ಮತ್ತು ಬಣ್ಣದ ನೀರನ್ನೆರಚುವುದರ ಮೂಲಕ ಜನರು ಸಂಭ್ರಮಿಸಿದ್ದು ಕಣ್ಣಿಗೆ ಕಟ್ಟುವಂತಿತ್ತು.

ದಾವಣಗೆರೆಯ ಚೇತನ ವೃತ್ತದಲ್ಲಿ ಸಾಂಪ್ರದಾಯಿಕ ಮೊಸರಿನ ಗಡಿಗೆ ಒಡೆಯುವ ಕಾರ್ಯಕ್ರಮವನ್ನು ಏರ್ಪಸಲಾಗಿತ್ತು. ಗೆದ್ದ ತಂಡಕ್ಕೆ 5000 ರೂ.ಬಹುಮಾನವನ್ನು ಘೋಷಿಸಿದ್ದರಿಂದಾಗಿ ಸಂಭ್ರಮದ ಹಬ್ಬಕ್ಕೆ ಸ್ಪರ್ಧೆಯ ಕಳೆ ಬಂದಿತ್ತು.

ಆದರೆ ಬೆಂಗಳೂರಿನ ಕದಿರೇನಹಳ್ಳಿಯ ವೃತ್ತದಲ್ಲಿ ನಡೆದ ಹೋಳಿ ಸಂಭ್ರಮ ಕೊಲೆಯೊಂದರಲ್ಲಿ ಪರ್ಯಾವಸಾನಗೊಂಡು ಆಚರಣೆಗೊಂದು ಕಪ್ಪು ಚುಕ್ಕೆಯನ್ನಿರಿಸಿತು. ಹೋಳಿ ಆಚರಣೆಯಲ್ಲಿ ತೊಡಗಿದ್ದ ಯುವಕನೋರ್ವನಿಗೆ ಅವನ ಸ್ನೇಹಿತನೇ ಚಾಕುವಿನಿಂದ ಇರಿದಿದ್ದರಿಂದ ಆತ ತೀವ್ರವಾಗಿ ಗಾಯಗೊಂಡ. ಕೂಡಲೇ ಅತನನ್ನು ಅಸ್ಪತ್ರೆಗೆ ದಾಖಲಿಸಲಾಯಿತಾದರೂ ಅತನ ಜೀವ ಉಳಿಯಲಿಲ್ಲ.

ಚೂರಿ ಹಾಕಿದವ ನಾಪತ್ತೆಯಾಗಿದ್ದಾನೆ ಹಾಗೂ ಸ್ನೇಹಿತರೂ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಧಾವಿಸಿರುವ ಪೊಲೀಸರು ಕೊಲೆಯಾದವನ ಸ್ನೇಹಿತರ ತಲಾಶೆಯಲ್ಲಿದ್ದು ಅವರು ಸಿಕ್ಕಿದಲ್ಲಿ ವಿವರವಾದ ಮಾಹಿತಿ ದೊರೆಯಲಿದೆ. ಇದುವರೆಗೂ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ವೈಯಕ್ತಿಕ ದ್ವೇಷವೇ ಕೊಲೆಗೆ ಕಾರಣವೆಂದು ತಿಳಿದುಬಂದಿದೆ.

ಇದನ್ನು ಹೊರತುಪಡಿಸಿದರೆ ಬೆಳಗ್ಗಿನಿಂದಲೇ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಬಣ್ಣದೋಕುಳಿ ಕಂಡುಬಂದಿತ್ತು. ಅದರಲ್ಲೂ ಮಾರವಾಡಿ ಸಮುದಾಯದವರು ಹೆಚ್ಚಾಗಿರುವ ಕಬ್ಬನ್‌ಪೇಟೆ, ಅವೆನ್ಯೂ ರಸ್ತೆ, ಚಿಕ್ಕಪೇಟೆ ಇವೇ ಮೊದಲಾದ ಪ್ರದೇಶಗಳಲ್ಲಿ ಹೋಳಿ ಹಬ್ಬದ ಸಂಭ್ರಮಾಚರಣೆ ನಡೆದು ವಾತಾವರಣಕ್ಕೊಂದು ಭವ್ಯಕಳೆಯನ್ನು ತಂದುಕೊಟ್ಟಿತ್ತು.

ವೆಬ್ದುನಿಯಾವನ್ನು ಓದಿ