ರಾತ್ರಿ ಪಾಳಿ: ಶೀಘ್ರದಲ್ಲೇ ಅಂತಿಮ ತೀರ್ಮಾನ

ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಉದ್ಯೋಗಿಗಳಿಗೆ ನಿಷೇಧ ಹೇರುವ ರಾಜ್ಯ ಸರಕಾರದ ನಿರ್ಧಾರವನ್ನು ಮತ್ತೆ ಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಕಟಿಸಿದ್ದಾರೆ.

ಈ ಕಾನೂನಿಗೆ ಸಂಬಂಧಿಸಿ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಮಹಿಳೆಯರಿಗೆ ರಾತ್ರಿ ಪಾಳಿ ನಿಷೇಧವನ್ನು ಮಾಡಿರುವ ಸರ್ಕಾರದ ಕ್ರಮಕ್ಕೆ ರಾಜ್ಯ ಮಹಿಳಾ ಆಯೋಗವೂ ತೀವ್ರ ಆತಂಕ ವ್ಯಕ್ತಪಡಿಸಿತ್ತು.

ರಾತ್ರಿ ಪಾಳಿ ನಿಷೇಧಿಸಿದರೆ ಮಹಿಳೆಯರ ಸ್ವಾವಲಂಬನೆ ಹಾಗೂ ಮೂಲಭೂತ ಹಕ್ಕಿಗೆ ಕೊಡಲಿಯೇಟು ನೀಡಿದಂತಾಗುತ್ತದೆ. ಈ ರೀತಿಯ ನಿಷೇಧಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಮಹಿಳಾ ಆಯೋಗದ ಅಧ್ಯಕ್ಷ ಪ್ರಮೀಳಾ ನೇಸರ್ಗಿ ಆಕ್ರೋಶ ವ್ಯಕ್ತಪಡಿಸಿದ್ದರು.

ದುಡಿಯುವ ಮಹಿಳೆಯರಿಗೆ ಕಿರುಕುಳ, ಲೈಂಗಿಕ ದೌರ್ಜನ್ಯ ನಡೆಯುತ್ತಿರುವ ದೂರುಗಳು ಬಂದಿದ್ದ ಹಿನ್ನಲೆಯಲ್ಲಿ ರಾತ್ರಿ ಪಾಳಿಯನ್ನು ನಿರ್ಬಂಧಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಕಾರ್ಮಿಕ ಸಚಿವ ಇಕ್ಬಾಲ್ ಅನ್ಸಾರಿ ನಿಷೇಧವನ್ನು ಸಮರ್ಥಿಸಿದ್ದರು.

ಆದರೆ, ನಿಷೇಧ ಹೇರುವ ಬದಲು ಮಹಿಳೆಯರಿಗೆ ಸೂಕ್ತ ಸಾರಿಗೆ ವ್ಯವಸ್ಥೆ, ರಾತ್ರಿ ಮನೆಗೆ ಬರುವಾಗ ವಿಶೇಷ ಭದ್ರತೆ ನೀಡಬೇಕು ಎಂಬ ಅಭಿಪ್ರಾಯ ಮಹಿಳಾ ಸಂಘಟನೆಗಳಿಂದ ವ್ಯಕ್ತವಾಗಿತ್ತು.

ವೆಬ್ದುನಿಯಾವನ್ನು ಓದಿ