ರೆಡ್ಡಿಗೆ ಮತ್ತೊಂದು ಹೊಡೆತ: ಗಣಿ ಸ್ಥಗಿತಕ್ಕೆ ಶಿಫಾರಸು

ಶುಕ್ರವಾರ, 20 ನವೆಂಬರ್ 2009 (21:16 IST)
NRB
ಕರ್ನಾಟಕ ಸರಕಾರವನ್ನು, ವಿಶೇಷವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಗಡಗಡನೆ ನಡುಗಿಸಿದ್ದ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿಗೇ ಈಗ ಹೊಸ ತಲೆನೋವು ಬಂದಿದ್ದು, ಆಂಧ್ರಪ್ರದೇಶದಲ್ಲಿ ಅವರು ನಡೆಸುತ್ತಿರುವ ಗಣಿಗಾರಿಕೆ ಸಕ್ರಮ ಎಂದು ದೃಢವಾಗುವವರೆಗೂ ಗಣಿಗಾರಿಕೆ ನಿಲ್ಲಿಸುವಂತೆ ಸುಪ್ರೀಂಕೋರ್ಟಿನ ಸಮಿತಿಯೊಂದು ಶಿಫಾರಸು ಮಾಡಿದೆ.

ಈ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನಲ್ಲಿ ಮುಂದಿನ ವಾರ ಅಂತಿಮ ನಿರ್ಣಯ ಹೊರಬೀಳುವ ಸಾಧ್ಯತೆಯಿದೆ. ರೆಡ್ಡಿಯ ಓಬಳಾಪುರಂ ಮೈನಿಂಗ್ ಕಾರ್ಪೋರೇಶನ್ ಮೀಸಲು ಅರಣ್ಯ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದೆ ಎಂದು ಆಂಧ್ರಪ್ರದೇಶದ ಪ್ರತಿಪಕ್ಷಗಳು (ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ನೇತೃತ್ವದಲ್ಲಿ) ಪ್ರತಿಭಟನೆ ನಡೆಸಿದ್ದವು.

ಇದೀಗ ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯದ ಸಮಿತಿಯೊಂದು ಸುಪ್ರೀಂ ಕೋರ್ಟಿಗೆ ವರದಿ ಸಲ್ಲಿಸಿದ್ದು, ಅನುಮತಿ ಇರುವ ಪ್ರದೇಶದಲ್ಲಿ ಮಾತ್ರವೇ ಗಣಿಗಾರಿಕೆ ನಡೆಯುತ್ತಿದೆಯೇ ಇಲ್ಲವೇ ಎಂಬ ಕುರಿತು ತಜ್ಞರ ಸ್ವತಂತ್ರ ತಂಡವೊಂದನ್ನು ರಚಿಸಿ ತಪಾಸಣೆ ನಡೆಸಬೇಕು, ಅದುವರೆಗೂ ಗಣಿಗಾರಿಕೆ ನಿಲ್ಲಿಸಬೇಕು ಎಂದು ಶಿಫಾರಸು ಮಾಡಿದೆ.

ಇದಲ್ಲದೆ, ಗಣಿಗಾರಿಕೆ ಅಕ್ರಮವಾಗಿ ನಡೆಯುತ್ತಿಲ್ಲ ಎಂದು ಸುಳ್ಳು ಹೇಳಿದ ಆಂಧ್ರ ಪ್ರದೇಶ ಸರಕಾರವನ್ನೂ ತರಾಟೆಗೆ ತೆಗೆದುಕೊಂಡಿರುವ ಸಮಿತಿ, ಲೀಸ್ ಒಪ್ಪಂದದಲ್ಲಿ ಉಲ್ಲೇಖಿತವಾಗದಿರುವ ಪ್ರದೇಶದಲ್ಲಿ ನಡೆಸಿದ ಗಣಿಗಾರಿಕೆಯಿಂದ ಹೊರತೆಗೆದ ಅದಿರಿಗೆ ಮೌಲ್ಯಕ್ಕೆ ಅನುಗುಣವಾಗಿ ರೆಡ್ಡಿ ಭಾರೀ ಮೊತ್ತದ ದಂಡ ತೆರುವಂತೆಯೂ ಸಮಿತಿ ಶಿಫಾರಸು ಮಾಡಿದೆ.

ರೆಡ್ಡಿ ಗಣಿಗಾರಿಕೆಯು ಅಕ್ರಮವಾಗಿಲ್ಲ ಎಂದು ಈ ಮೊದಲು ಆಂಧ್ರ ಸರಕಾರ ಹೇಳಿತ್ತು. ರಾಜ್ಯ ಸರಕಾರವೊಂದು ನ್ಯಾಯಯುತವಾಗಿ, ನಿಷ್ಪಕ್ಷಪಾತತನದಿಂದ ವರ್ತಿಸಲು ವಿಫಲವಾಗಿರುವುದು ಆಘಾತಕಾರಿ ಮತ್ತು ಅದರ ಮೇಲೆ ವಿಶ್ವಾಸ ಹೋಗಲು ಕಾರಣವಾಗಿದೆ ಎಂದು ಸಮಿತಿ ಹೇಳಿದೆ.

ಇದೀಗ ಮುಂದಿನ ವಾರ ಸುಪ್ರೀಂ ಕೋರ್ಟಿನಲ್ಲಿ ಈ ಕುರಿತು ಪರಾಮರ್ಶೆ ನಡೆಯಲಿದೆ.

ವೆಬ್ದುನಿಯಾವನ್ನು ಓದಿ