ವಂಚಕ ಗಂಡನಿಗೆ ಪತ್ನಿಯರಿಂದ ಠಾಣೆಯಲ್ಲೇ ಚಪ್ಪಲಿ ಸೇವೆ!

ಶುಕ್ರವಾರ, 7 ಜನವರಿ 2011 (20:48 IST)
ಪ್ರೀತಿ-ಪ್ರೇಮದ ನೆಪದಲ್ಲಿ ಯುವತಿಯರಿಗೆ ವಿಪ್ರೋ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಇಬ್ಬರನ್ನು ಮದುವೆಯಾದ ವಂಚಕನಿಗೆ ಪೊಲೀಸ್ ಠಾಣೆಯಲ್ಲಿ ಪತ್ನಿಯರೇ ಚಪ್ಪಲಿ ಸೇವೆ ಮಾಡಿದ ಘಟನೆ ನಡೆದಿದೆ.!

ದಾಸರಹಳ್ಳಿಯ ಲಕ್ಷ್ಮೀಪತಿ ಎಂಬಾತ ಯುವತಿಯರ ಬಳಿ ವಿಪ್ರೋ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿಕೊಂಡು ಲಕ್ಷಾಂತರ ರೂಪಾಯಿ ವಂಚಿಸಿದ್ದ. ಅದೇ ರೀತಿ ಲಕ್ಷ್ಮೀಪತಿ ಎಚ್‌ಪಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ರೇಣುಕಾ ಎಂಬಾಕೆಗೂ ವಿಪ್ರೋ ಕಂಪನಿಯಲ್ಲಿ ಕೆಲಸ ಕೊಡಿಸೋ ಆಮಿಷ ಒಡ್ಡಿ ಸುಮಾರು 1.20 ಲಕ್ಷ ರೂಪಾಯಿ ಲಪಟಾಯಿಸಿದ್ದ. ನಂತರ ಆಕೆಯನ್ನು ಪ್ರೇಮಿಸಿ ವಿವಾಹ ಕೂಡ ಆಗಿದ್ದ. ಆದರೆ ಲಕ್ಷ್ಮಿಪತಿಯ ವಂಚಕ ಬುದ್ಧಿ ಬಯಲಾಗಿತ್ತು.

ವಂಚನೆಗೊಳಗಾದ ರೇಣುಕಾ ಸ್ಥಳೀಯ ಸಂಘಟನೆಯೊಂದರ ನೆರವು ಪಡೆದು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಬಳಿಕ ಈತ ಹಲವಾರು ಜನರಿಗೆ ವಂಚಿಸಿದ ಅಂಶ ಒಂದೊಂದಾಗಿಯೇ ಬೆಳಕಿಗೆ ಬರತೊಡಗಿತ್ತು. ಅಂತೂ ವಂಚಕ ಗುರುವಾರ ಕಾವೇರಿ ಥಿಯೇಟರ್ ಬಳಿ ರೇಣುಕಾ ಸೇರಿದಂತೆ ಸಂಘಟನೆಯವರ ಕೈಗೆ ಸಿಕ್ಕಿ ಬಿದ್ದಿದ್ದ.

ಆತನನ್ನು ಕೂಡಲೇ ಠಾಣೆಗೆ ಕರೆದೊಯ್ದಿದ್ದರು. ಈ ಸುದ್ದಿ ತಿಳಿದು ಈ ಮೊದಲು ವಂಚನೆಗೊಳಗಾಗಿದ್ದ ಯುವತಿ, ಮೊದಲ ಪತ್ನಿ ಅನಿತಾ ಕೂಡ ಠಾಣೆಗೆ ಬಂದಿದ್ದಳು. ಅಲ್ಲಿ ಅನಿತಾ ಮತ್ತು ರೇಣುಕಾ ಚಪ್ಪಲಿಯಲ್ಲಿ ಮನಸೋ ಇಚ್ಛೆ ಥಳಿಸಿದ್ದರು.

ರೇಣುಕಾಳನ್ನು ಮದುವೆಯಾಗೋ ಮುನ್ನ ಲಕ್ಷ್ಮೀಪತಿ ಅನಿತಾಳ ಬಳಿಯೂ ತಾನು ಸಾಫ್ಟ್‌ವೇರ್ ಇಂಜಿನಿಯರ್, ನಿನಗೂ ವಿಪ್ರೋ ಕಂಪನಿಯಲ್ಲಿ ಕೆಲಸ ಮಾಡಿಸಿಕೊಡುತ್ತೇನೆ ಎಂದು ಲಕ್ಷಾಂತರ ರೂಪಾಯಿ ವಂಚಿಸಿ, ಮದುವೆಯಾಗಿದ್ದ. ಎರಡನೇ ಬಲಿಪಶುವೇ ರೇಣುಕಾ. ಅಷ್ಟೇ ಅಲ್ಲ ಮತ್ತೊಬ್ಬ ಯುವಕನ ಬಳಿಯೂ 50 ಸಾವಿರ ರೂಪಾಯಿ ಪಡೆದು ವಿಪ್ರೋದಲ್ಲಿ ಕೆಲಸ ಮಾಡಿಸಿಕೊಡುವುದಾಗಿ ಹೇಳಿದ್ದ. ಹೀಗೆ ಈತ ಸುಮಾರು 20 ಲಕ್ಷ ರೂಪಾಯಿ ವಂಚಿಸಿದ್ದಾನೆ ಎಂಬುದು ಪೊಲೀಸರ ವಿವರಣೆ. ಅಂತೂ ಇದೀಗ ಇಬ್ಬರ ಹೆಂಡಿರ ವಂಚಕ ಗಂಡ ಪೊಲೀಸರ ಅತಿಥಿಯಾಗಿದ್ದಾನೆ.

ವೆಬ್ದುನಿಯಾವನ್ನು ಓದಿ