ವಿಧಾನಸೌಧಕ್ಕೆ ಮುತ್ತಿಗೆ: ರೈತ ಸಂಘ ಎಚ್ಚರಿಕೆ

ಸೋಮವಾರ, 4 ಆಗಸ್ಟ್ 2008 (11:52 IST)
NRB
ಇನ್ನೆರಡು ದಿನಗಳ ಒಳಗೆ ರೈತರ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರ ಮುಂದಾಗದಿದ್ದಲ್ಲಿ, ಆ.11ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ರಾಜ್ಯ ರೈತಸಂಘದ ಅಧ್ಯಕ್ಷ ಕೆ.ಎಸ್. ಪುಟ್ಟಣ್ಣಯ್ಯ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತ ಸಂಘದ ನೇತೃತ್ವದಲ್ಲಿ ಕಳೆದ ಕೆಲವು ದಿನಗಳಿಂದ ಕಬ್ಬಿನ ಬಾಕಿ ಹಣ ಪಾವತಿ, ರೂ. 160 ಪ್ರೋತ್ಸಾಹ ಧನ ಬಿಡುಗಡೆ ಹಾಗೂ ಕಬ್ಬಿಗೆ ದರ ನಿಗದಿ ಮಾಡಲು ಸರ್ಕಾರ ಮುಂದಾಗಬೇಕೆಂದು ಧರಣಿ ಸತ್ಯಾಗ್ರಹ ನಡೆಸುತ್ತಲೇ ಬಂದಿದ್ದೇವೆ. ಆದರೆ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.

ಒಂದು ವೇಳೆ ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, 25 ರಿಂದ 30 ಸಾವಿರ ರೈತರ ಜೊತೆಗೂಡಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಅವರು ಎಚ್ಚರಿಸಿದರು.

ಕಬ್ಬಿನ ಬೆಲೆ ನಿಗದಿ ಮಾಡದಿರುವುದರಿಂದ ಜಿಲ್ಲೆಯ 15 ಸಾವಿರ ಹೆಕ್ಟೇರ್ ಪ್ರದೇಶದ ರೈತರು ಭತ್ತದ ಬೆಳೆ ಹಾಕಲು ಮುಂದಾಗಿದ್ದಾರೆ. ಈ ಮೂಲಕ ಮುಂದಿನ ಸಾಲಿಗೆ ಕಬ್ಬಿನ ಅಭಾವ ಎದುರಾಗಲಿದೆ ಎಂದು ತಿಳಿಸಿದ ಅವರು, ಈ ನಿಟ್ಟಿನಲ್ಲಿ ಕಾರ್ಖಾನೆಗಳ ಮಾಲೀಕರು ಹಾಗೂ ರೈತರ ಸಭೆಯನ್ನು ಕರೆಯಬೇಕು. ಖಾಸಗಿ ಕಾರ್ಖಾನೆಯವರು ಪ್ರೋತ್ಸಾಹ ಧನ ಬಿಡುಗಡೆ ಮಾಡದಿದ್ದರೆ, ಸರ್ಕಾರವೇ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ವೆಬ್ದುನಿಯಾವನ್ನು ಓದಿ