ವಿಪಕ್ಷದವ್ರು ಹುಚ್ಚರ ರೀತಿ ವರ್ತಿಸುತ್ತಿದ್ದಾರೆ: ಸಿ.ಟಿ.ರವಿ

ಬುಧವಾರ, 30 ಸೆಪ್ಟಂಬರ್ 2009 (17:34 IST)
NRB
ರಾಜ್ಯದ ಸಚಿವರಿಗೆ ಅಭಿವೃದ್ಧಿಯ ಪಾಠ ಹೇಳುತ್ತಿರುವುದನ್ನು ಟೀಕಿಸುವ ಮೂಲಕ ವಿರೋಧ ಪಕ್ಷಗಳ ಮುಖಂಡರು ಹುಚ್ಚಾಸ್ಪತ್ರೆಯ ರೋಗಿಗಳಂತೆ ವರ್ತಿಸುತ್ತಿದ್ದು, ಅವರಿಗೆ ಜನರೇ ವೈದ್ಯರ ಹಾಗೆ ಕೆಲಸ ಮಾಡಿ ಚಿಕಿತ್ಸೆ ನೀಡುತ್ತಾರೆ ಎಂದು ಬಿಜೆಪಿ ಟೀಕಿಸಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಸಿ.ಟಿ.ರವಿ, ಗುಜರಾತ್‌ನಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿಶ್ವಸಂಸ್ಥೆ, ಕೇಂದ್ರ ಹಣಕಾಸು ಆಯೋಗ, ರಾಜೀವ್ ಗಾಂಧಿ ಫೌಂಡೇಶನ್‌ಗಳು ಪ್ರಶಂಸೆ ವ್ಯಕ್ತಪಡಿಸಿವೆ. ಅಂತಹ ರಾಜ್ಯದ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಂದ ಅಭಿವೃದ್ಧಿಯ ಪಾಠ ಹೇಳಿಸಿಕೊಳ್ಳುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್‌ನವರಿಗೆ ಭಜನೆ, ಭಟ್ಟಂಗಿತನದ ಶಿಕ್ಷಣ ಬಿಟ್ಟರೆ ಬೇರೆ ಶಿಕ್ಷಣ ಇಲ್ಲ, ಹಾಗಾಗಿ ಅವರು ಹುಚ್ಚಾಸ್ಪತ್ರೆಯ ರೋಗಿಗಳಂತೆ ವರ್ತಿಸುತ್ತಿದ್ದಾರೆ. ಜನರೇ ವೈದ್ಯರಾಗಿ ಅವರಿಗೆ ಚಿಕಿತ್ಸೆ ನೀಡುತ್ತಾರೆ ಎಂದು ತಿರುಗೇಟು ನೀಡಿದರು.

ಹುಟ್ಟಿದಾಗಿನಿಂದಲೂ ಯಾರೂ ಸರ್ವಜ್ಞರಲ್ಲ, ಆಡಳಿತ ಅನುಭವ ಹೊಂದಿರುವುದಿಲ್ಲ. ಅನುಭವಿಗಳಿಂದ ಪಾಠ ಹೇಳಿಸಿಕೊಳ್ಳುವುದು ಒಳ್ಳೆಯ ಲಕ್ಷಣ ಎಂದ ಅವರು ಸುತ್ತೂರಿನಲ್ಲಿ ಸಚಿವರುಗಳಿಗೆ ಪಾಠ ಹೇಳುತ್ತಿರುವುದನ್ನು ಸಮರ್ಥಿಸಿಕೊಂಡರು.

ಆರ್ಎಸ್‌ಎಸ್ ಬಿಜೆಪಿಯವರಿಗೆ ತಾಯಿ ಇದ್ದಂತೆ, ತಾಯಿಯಿಂದ ಪಾಠ ಹೇಳಿಸಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಅದು ಒಳ್ಳೆಯದೆ. ಆರ್‌ಎಸ್‌ಎಸ್ ಮೊದಲಿನಿಂದಲೂ ನಿಸ್ವಾರ್ಥವಾಗಿ ದೇಶ ಸೇವೆಯಲ್ಲಿ ತೊಡಗಿದೆ ಎಂದರು.

ವೆಬ್ದುನಿಯಾವನ್ನು ಓದಿ