ವ್ಯಾಲೆಂಟೈನ್ ಡೇ ಎಫೆಕ್ಟ್, ಈಗ ಪ್ರೀತಿಗೂ ವಾಮಾಚಾರ?

ಶನಿವಾರ, 12 ಫೆಬ್ರವರಿ 2011 (11:35 IST)
ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಹುಯಿಲೆಬ್ಬಿಸಿರುವ ವಾಮಾಚಾರದ ಕಾಟ ಇದೀಗ ಪ್ರೇಮಿಗಳಿಗೂ ತಗುಲಿದೆಯಾ ಎಂಬ ಪ್ರಶ್ನೆ ಮೂಡುವಂತೆ ಮಾಡಿರುವ ಘಟನೆಯೊಂದು ದಾವಣಗೆರೆ ಕಾಲೇಜು ಆವರಣದಲ್ಲಿ ನಡೆದಿದೆ.

ಪ್ರೇಮಿಗಳ ದಿನಾಚರಣೆಗೆ ಎರಡು ದಿನ ಬಾಕಿ ಇರುವಾಗಲೇ ತಾನು ಪ್ರೀತಿಸಿದ ಹುಡುಗಿಯನ್ನು ಒಲಿಸಿಕೊಳ್ಳಲು ವಾಮಾಚಾರ ಮಾರ್ಗ ಅನುಸರಿಸಿರುವ ಘಟನೆ ಡಿಆರ್ಎಂ ವಿಜ್ಞಾನ ಕಾಲೇಜಿನ ಆವರಣದಲ್ಲಿ ನಡೆದಿದೆ. ಇದನ್ನು ಗಮನಿಸಿದ ವಿದ್ಯಾರ್ಥಿಗಳು ಕೂಡಲೇ ಪ್ರಾಂಶುಪಾಲರ ಗಮನಕ್ಕೆ ತಂದಿದ್ದಾರೆ.

ಸಾಮಾನ್ಯವಾಗಿ ವಾಮಾಚಾರ ಮಾಡುವುದಾದರೆ ಅರಶಿನ, ಕುಂಕುಮ, ಕೋಳಿ, ಅನ್ನ ಇತ್ಯಾದಿ ಬಳಸುವುದು ಸಾಮಾನ್ಯ. ಆದರೆ ಇಲ್ಲಿ ಮಡಿಕೆಯೊಂದರಲ್ಲಿ ಕೆಂಪು ಗುಲಾಬಿ ಹೂ,ಅನ್ನ, ಪರ್ಫ್ಯೂಮ್, ಸಿಗರೇಟ್ ಅನ್ನು ಇಟ್ಟಿರುವುದು ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ.

ಇಲ್ಲಿ ಉಪಯೋಗಿಸಿರುವ ವಸ್ತುಗಳನ್ನು ಗಮನಿಸಿದರೆ ಯುವತಿಯನ್ನು ಒಲಿಸಿಕೊಳ್ಳಲು ದುಷ್ಕರ್ಮಿಗಳು ವಾಮಾಚಾರ ಮಾಡಿರಬಹುದು ಎಂದು ಸಬ್ ಇನ್ಸ್‌ಪೆಕ್ಟರ್ ಯು.ಸತೀಶ್ ಕುಮಾರ್ ತಿಳಿಸಿದ್ದಾರೆ.

ಪ್ರೇಮಿಗಳ ದಿನಾಚರಣೆ ತಡೆಯೋ ಹಕ್ಕಿಲ್ಲ:ಅಶೋಕ
ವಿದೇಶಿ ಸಂಸ್ಕೃತಿ ವಿರುದ್ಧ ಯುವ ಜನತೆಯಲ್ಲಿ ಅರಿವು ಮೂಡಿಸಲಾಗುವುದು ಎಂದು ಶ್ರೀರಾಮಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್ ತಿಳಿಸಿದ್ದು, ಈ ಬಾರಿಯೂ ಪ್ರೇಮಿಗಳ ದಿನಾಚರಣೆಯಂದು ಅಸಭ್ಯ ವರ್ತನೆ ವಿರುದ್ಧ ಕಣ್ಗಾವಲು ಇಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ ಏತನ್ಮಧ್ಯೆ, ಪ್ರೇಮಿಗಳ ದಿನಾಚರಣೆಯನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ ಎಂದು ಗೃಹ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಅಲ್ಲದೇ ಪ್ರೇಮಿಗಳ ದಿನಾಚರಣೆಯಂದು ಗೊಂದಲ, ಗಲಾಟೆ ನಡೆಸಿದ್ದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ