ಶಸ್ತ್ರಚಿಕಿತ್ಸೆ ಬಳಿಕ ಎಂಜಿನಿಯರ್ ನಿಗೂಢ ಸಾವು

ಮಂಗಳವಾರ, 20 ಆಗಸ್ಟ್ 2013 (13:06 IST)
PR
PR
ಬೆಂಗಳೂರು: ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೋಮವಾರ 50 ವರ್ಷ ವಯಸ್ಸಿನ ವ್ಯಕ್ತಿ ನಿಗೂಢ ರೀತಿಯಲ್ಲಿ ಶಸ್ತ್ರಚಿಕಿತ್ಸೆ ನಂತರ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಜ್ಞಾನಪ್ರಕಾಶ್ ಎಂದು ಗುರುತಿಸಲಾಗಿದ್ದು, ಖಾಸಗಿ ಕಂಪೆನಿಯಲ್ಲಿ ಮೆಕಾನಿಕಲ್ ಎಂಜಿನಿಯರ್ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಪೊಲೀಸರ ಪ್ರಕಾರ, ಜ್ಞಾನಪ್ರಕಾಶ್‌ಗೆ ಸಣ್ಣ ರಸ್ತೆ ಅಪಘಾತದಿಂದ ಕಾಲಿನಲ್ಲಿ ಗಾಯವಾಗಿತ್ತು. ಹೊಸ್ಮಾಟ್ ಆಸ್ಪತ್ರೆಯ ವೈದ್ಯರು ಅವರನ್ನು ಪರೀಕ್ಷಿಸಿ, ಸಣ್ಣ ಶಸ್ತ್ರಚಿಕಿತ್ಸೆ ಸಲುವಾಗಿ ಆಸ್ಪತ್ರೆಗೆ ಕರೆಸಿದ್ದರು.

ಸಲಹೆಯಂತೆ ಜ್ಞಾನಪ್ರಕಾಶ್ ಆಸ್ಪತ್ರೆಗೆ ಸೇರಿ ಶಸ್ತ್ರಚಿಕಿತ್ಸೆ ಬಳಿಕ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದಾರೆ. ಇದರಿಂದ ತೀವ್ರ ದುಃಖಿತರಾದ ಅವರ ಪತ್ನಿ ಹಲಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.ಆದರೆ ಹೊಸ್ಮಾಟ್ ವೈದ್ಯಕೀಯ ನಿರ್ದೇಶಕ ಎ.ಚಾಂಡಿ ಹೇಳುವ ಪ್ರಕಾರ, ಯಾವುದೇ ವೈದ್ಯಕೀಯ ನಿರ್ಲಕ್ಷ್ಯವಿರಲಿಲ್ಲ. ಅವರನ್ನು ಮುರಿದ ಕಾಲಿನ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಶಸ್ತ್ರಚಿಕಿತ್ಸೆ ಬಳಿಕ ಅವರು ಮಾತನಾಡಿದ್ದರು. ಆದರೆ ನಂತರ ಹೃದಯಾಘಾತದಿಂದ ಸತ್ತಿದ್ದಾರೆ. ನಾವು ಅವರ ಮರಣೋತ್ತರ ವರದಿಗಾಗಿ ಕಾಯುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ