ಶಾಲಾ-ಕಾಲೇಜು ಸ್ಥಾಪನೆಗೆ ಉಚಿತ ಭೂಮಿ: ಸಿಎಂ

ಗುರುವಾರ, 22 ಅಕ್ಟೋಬರ್ 2009 (17:28 IST)
ನೆರೆ ಹಾವಳಿಗೆ ಗುರಿಯಾಗಿರುವ ಪ್ರದೇಶಗಳಲ್ಲಿ ಖಾಸಗಿಯವರು ಶಾಲಾ ಕಾಲೇಜುಗಳನ್ನು ಪ್ರಾರಂಭಿಸಿದರೆ ಉಚಿತವಾಗಿ ಭೂಮಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಉಚಿತವಾಗಿ ಭೂಮಿ ನೀಡಲಿಕ್ಕೆ ತೊಡಕಾಗಿರುವ ಕಾನೂನಿಗೆ ತಿದ್ದುಪಡಿ ತಂದು ಶಾಲಾ-ಕಾಲೇಜುಗಳ ಸ್ಥಾಪನೆಗೆ ಅಗತ್ಯವಿರುವ ಭೂಮಿಯನ್ನು ಉಚಿತವಾಗಿ ನೀಡಲಾಗುವುದು ಎಂದರು.

ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ವೈದ್ಯಕೀಯ ಕಾಲೇಜುಗಳಿಗೆ 10ಎಕರೆ, ಇಂಜಿನಿಯರಿಂಗ್ ಕಾಲೇಜುಗಳಿಗೆ 5ಎಕರೆ, ಪಾಲಿಟೆಕ್ನಿಕ್ ಕಾಲೇಜುಗಳ ಸ್ಥಾಪನೆಗೆ ಮುಂದಾಗುವ ಸಂಸ್ಥೆಗಳಿಗೆ 2ಎಕರೆ ಜಮೀನು ಉಚಿತವಾಗಿ ನೀಡಲಾಗುವುದು ಎಂದು ಹೇಳಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ನಡೆದ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಈ ಸಭೆಯಲ್ಲಿ ಸಚಿವರಾದ ರಾಮಚಂದ್ರ ಗೌಡ, ಅರವಿಂದ ಲಿಂಬಾವಳಿ, ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ನೆರೆ ಹಾವಳಿಯಿಂದ ಉತ್ತರ ಕರ್ನಾಟಕದಲ್ಲಿ ಹಿಂದೆಂದೂ ಕಾಣದಷ್ಟು ಭೀಕರ ಪರಿಸ್ಥಿತಿ ಉಂಟಾಗಿದೆ. ಈ ಸಂದರ್ಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ನೊಂದವರ ನೆರವಿಗೆ ಮುಂದಾಗಬೇಕಿದೆ, ಕೆಲವು ಗ್ರಾಮಗಳನ್ನು ದತ್ತು ಪಡೆದು ಪುನರ್ವಸತಿ ಕಲ್ಪಿಸುವುದಾದರೆ ಕಲ್ಪಿಸಿ, ಇಲ್ಲವೆ ಹಣದ ರೂಪದಲ್ಲಿ ನೆರವು ನೀಡುವುದಾದರೆ ನೀಡಿ. ಒಟ್ಟಾರೆ ಆಯ್ಕೆ ನಿಮ್ಮದು ಎಂದು ಅವರು ಕಳಕಳಿಯ ಮನವಿ ಮಾಡಿದರು.

ವೆಬ್ದುನಿಯಾವನ್ನು ಓದಿ