ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ ಡಬಲ್: ಮುಖ್ಯಮಂತ್ರಿ ಘೋಷಣೆ

ಮಂಗಳವಾರ, 30 ಜುಲೈ 2013 (16:04 IST)
PR
PR
ಬೆಂಗಳೂರು: ಶಾಸಕರ ಕ್ಷೇತ್ರಾಭಿವೃದ್ದಿ ನಿಧಿಯ ಮೊತ್ತವನ್ನು ಒಂದು ಕೋಟಿ ರೂ.ನಿಂದ 2 ಕೋಟಿ ರೂ.ಗಳಿಗೆ ಏರಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಘೋಷಿಸಿದರು. ಭಾಗ್ಯಲಕ್ಷ್ಮಿ, ನಮ್ಮ ಗ್ರಾಮ, ನಮ್ಮ ರಸ್ತೆ, ಬೈಸಿಕಲ್ ಯೋಜನೆಗಳು ಮುಂದುವರಿಯಲಿವೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಆಡಳಿತ ಪಕ್ಷದ ಶಾಸಕರ ತೀವ್ರ ಒತ್ತಡದ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರಾಭಿವೃದ್ಧಿ ನಿಧಿಯ ಮೊತ್ತವನ್ನು ಒಂದು ಕೋಟಿ ರೂ.ನಿಂದ ಎರಡು ಕೋಟಿ ರೂ.ಗೆ ಹೆಚ್ಚಳ ಮಾಡಲು ಒಪ್ಪಿದ್ದರು. ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರ ನಿಧಿಯನ್ನು ಎರಡು ಕೋಟಿ ರೂ.ಗೆ ಹೆಚ್ಚಿಸುವ ಭರವಸೆ ನೀಡಿದ್ದರು.

ಕ್ಷೇತ್ರಾಭಿವೃದ್ಧಿ ನಿಧಿ ಕೇವಲ ಒಂದು ಕೋಟಿ ಕೊಡುವುದರಿಂದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದಕ್ಕೆ ಅಡ್ಡಿಯಾಗಿದೆ. ಆದ್ದರಿಂದ ಇದನ್ನು ಮೂರು ಕೋಟಿ ರೂ.ಗಳಾದರೂ ಹೆಚ್ಚಿಸಬೇಕು ಎಂದು ತಿಪಟೂರು ಶಾಸಕ ಷಡಕ್ಷರಿ ಹೇಳಿದ್ದರು. ಆದರೆ ಮುಖ್ಯಮಂತ್ರಿ ಈ ನಿಧಿಯನ್ನು ಎರಡು ಕೋಟಿ ರೂ.ಗಳಿಗೆ ಹೆಚ್ಚಿಸಿ ಸದನದಲ್ಲಿ ಘೋಷಣೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ