ಶಾಸಕ ಗೌರಿಶಂಕರ್ ಜೆಡಿಎಸ್‌ಗೆ ಗುಡ್ ಬೈ

ಸೋಮವಾರ, 18 ಆಗಸ್ಟ್ 2008 (20:33 IST)
ದೇವೇಗೌಡರ ರಾಜಕೀಯ ನಿಲುವುಗಳಿಗೆ ಬೇಸತ್ತು ಜೆಡಿಎಸ್ ಶಾಸಕ ಉಮೇಶ್ ಕತ್ತಿ ರಾಜೀನಾಮೆ ನೀಡಿದ ಬೆನ್ನಲ್ಲೇ, ಮಧುಗಿರಿ ಶಾಸಕ ಗೌರಿಶಂಕರ್ ಕೂಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಜೆಡಿಎಸ್‌ನ ಬುಡ ಅಲ್ಲಾಡತೊಡಗಿದೆ.

ಸ್ಪೀಕರ್ ಜಗದೀಶ್ ಶೆಟ್ಟರ್ ಅವರಿಗೆ ರಾಜೀನಾಮೆ ಪತ್ರವನ್ನು ಸೋಮವಾರ ಸಲ್ಲಿಸಿದ್ದಾರೆ. ಈ ಮೂಲಕ ಒಂದೇ ದಿನದಲ್ಲಿ ಎರಡು ಜೆಡಿಎಸ್ ಶಾಸಕರು ಪಕ್ಷವನ್ನು ತೊರೆದಂತಾಗಿದೆ.

ಸಚಿವ ಪದವಿಗೆ ಇಚ್ಚೆ ಪಟ್ಟಿದ್ದರೆ ಅಂದೇ ಬಿಜೆಪಿ ಸೇರುತ್ತಿದ್ದೆ. ಅದರೆ ದೇವೇಗೌಡರ ನಿಲುವುಗಳು ತಮಗೆ ಬೇಸರ ತಂದಿದೆ. ಈ ಹಿನ್ನೆಲೆಯಲ್ಲಿ ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿರುವ ಅವರು,ತಾನು ಬಿಜೆಪಿ ಸೇರುವುದಾಗಿ ತಿಳಿಸಿದ್ದಾರೆ.

ಯಡಿಯೂರಪ್ಪನವರು ತಮ್ಮ ನಾಯಕರು ಎಂದು ತಿಳಿಸಿರುವ ಅವರು, ಪ್ರತಿಪಕ್ಷದಲ್ಲಿದ್ದರೆ ಕ್ಷೇತ್ರದ ಅಭಿವೃದ್ದಿ ಅಸಾಧ್ಯ. ತಮ್ಮ ಜನತೆ ನೀಡಿರುವ ಆಶ್ವಾಸನೆಯನ್ನು ಈಡೇರಿಸುವ ನಿಟ್ಟಿನಲ್ಲಿ ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ ಜೆಡಿಎಸ್‌‌ನ ಇನ್ನೊರ್ವ ನಾಯಕ ಚನ್ನಿಗಪ್ಪ ತಮ್ಮ ತೀರ್ಮಾನವನ್ನು ಇದೇ 21ರಂದು ನಿರ್ಧರಿಸುವುದಾಗಿ ಹೇಳಿದ್ದಾರೆ.

ಮಂಕು ಕವಿದ ಜೆಡಿಎಸ್ ಪಾಳಯ:
ದಿಢೀರ್ ನಡೆದ ರಾಜಕೀಯ ಬೆಳವಣಿಗೆಯಿಂದ ಜೆಡಿಎಸ್ ನಾಯಕರು ನಿಜಕ್ಕೂ ಆತಂಕಗೊಂಡಿದ್ದಾರೆ. ಈಗಾಗಲೇ ಪಕ್ಷದ ಘಟಾನುಘಟಿಗಳು ಪಕ್ಷ ತೊರೆಯುತ್ತಿರುವುದು ಜೆಡಿ ಎಸ್‌‌ಗೆ ತಲೆನೋವಾಗಿ ಪರಿಣಮಿಸಿದೆ. ಬಿಜೆಪಿಯ ಅಪರೇಶನ್ ಕಮಲಕ್ಕೆ ಬೆದರಿರುವ ಜೆಡಿಎಸ್ ಎಲ್ಲಾ ಪ್ರಮುಖ ನಾಯಕರನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ.

ವೆಬ್ದುನಿಯಾವನ್ನು ಓದಿ