ಶಾಸ್ತ್ರೀಯ ಸ್ಥಾನ-ರಾಜ್ಯ ಪ್ರತಿವಾದಿಯಾಗಲಿ: ಚಿಮೂ

ಮಂಗಳವಾರ, 18 ನವೆಂಬರ್ 2008 (17:50 IST)
ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನದ ಗೌರವ ನೀಡಿರುವುದನ್ನು ಪ್ರಶ್ನಿಸಿ ಮದ್ರಾಸ್‌ ಹೈಕೋರ್ಟ್‌ನಲ್ಲಿ ಹಿರಿಯ ವಕೀಲ ಆರ್.ಗಾಂಧಿ ಅವರು ಸಲ್ಲಿಸಿರುವ ತಕರಾರು ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಕೂಡ ಪ್ರತಿವಾದ ಮಂಡಿಸಬೇಕು ಎಂದು ಖ್ಯಾತ ಸಂಶೋಧಕ ಚಿದಾನಂದ ಮೂರ್ತಿ ಆಗ್ರಹಿಸಿದ್ದಾರೆ.

ಮದ್ರಾಸ್ ಹೈಕೋರ್ಟ್‌ನಲ್ಲಿ ಗಾಂಧಿ ಕರ್ನಾಟಕ ಸರ್ಕಾರವನ್ನು ಪ್ರತಿವಾದಿಯನ್ನಾಗಿ ಮಾಡಿಲ್ಲ, ಕೇಂದ್ರ ಸರ್ಕಾರ ಮತ್ತು ಭಾಷಾ ತಜ್ಞರ ಸಮಿತಿಯನ್ನು ಪ್ರತಿವಾದಿಯನ್ನಾಗಿ ಮಾಡಿದ್ದಾರೆ.

ಈಗಾಗಲೇ ಆಂಧ್ರಪ್ರದೇಶ ಸರಕಾರ ತನ್ನನ್ನೇ ಪ್ರತಿವಾದಿಯನ್ನಾಗಿ ಮಾಡಿಕೊಂಡು ಅರ್ಜಿ ಸಲ್ಲಿಸಿರುವುದರಿಂದ ರಾಜ್ಯ ಸರಕಾರ ಕೂಡ ಅದೇ ಮಾದರಿಯಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.

ಮದ್ರಾಸ್ ಹೈಕೋರ್ಟ್‌ನಲ್ಲಿ ನ.27ರಂದು ಗಾಂಧಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯಲಿದೆ. ನ್ಯಾಯಾಲಯ ಅರ್ಜಿಯ ವಿಚಾರಣೆ ಇತ್ಯರ್ಥ ಪಡಿಸುವವರೆಗೂ ಕನ್ನಡಕ್ಕೆ ಕೇಂದ್ರ ಸರಕಾರ ನೀಡಿರುವ ಶಾಸ್ತ್ರೀಯ ಸ್ಥಾನಮಾನ ಆದೇಶ ಜಾರಿಯಾಗುವುದಿಲ್ಲ.

ಆ ನಿಟ್ಟಿನಲ್ಲಿ ರಾಜ್ಯ ಸರಕಾರ ಶೀಘ್ರವೇ ಸ್ವಯಂ ಆಗಿ ಅರ್ಜಿ ಸಲ್ಲಿಸಿ, ಪ್ರತಿವಾದಿಯಾಗಿ ತನ್ನ ವಾದ ಮಂಡಿಸುವಂತೆ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವೆಬ್ದುನಿಯಾವನ್ನು ಓದಿ