ಶೆಟ್ಟರ್ ಸರಕಾರದ ಭವಿಷ್ಯ ಶೀಘ್ರ ನಿರ್ಧಾರ: ಕೆಜೆಪಿ

ಸೋಮವಾರ, 31 ಡಿಸೆಂಬರ್ 2012 (11:12 IST)
PR
ಹೊಸ ವರ್ಷದಿಂದ ರಾಜ್ಯದಲ್ಲಿ ಬಿಜೆಪಿ ಮತ್ತು ಕೆಜೆಪಿ ನಡುವಿನ ಜಟಾಪಟಿ, ಪೈಪೋಟಿ ತೀವ್ರಗೊಳ್ಳುವುದು ನಿಶ್ಚಿತವಾಗಿದೆ.

ಬರುವ ಜ.4ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಕೆಜೆಪಿಯ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ಬಿಜೆಪಿ ಸರ್ಕಾರದ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ಆದರೆ, ಅದರ ಬೆನ್ನಲ್ಲೇ ಸರ್ಕಾರವನ್ನು ಉಳಿಸಿಕೊಳ್ಳುವ ಹಾಗೂ ಬಿಜೆಪಿಯ ಸಂಘಟನೆಯನ್ನು ಬಲಪಡಿಸುವ ಸಂಬಂಧ ಪಕ್ಷದ ಹಿರಿಯ ನಾಯಕರಾದ ಅರುಣ್‌ ಜೇಟ್ಲಿ, ನಿರ್ಮಲಾ ಸೀತಾರಾಂ ಬೆಂಗಳೂರಿಗೆ ಆಗಮಿಸುವ ಸಾಧ್ಯತೆಯಿದೆ.

ಗುಜರಾತ್‌ ಚುನಾವಣೆಯನ್ನು ಯಶಸ್ವಿಯಾಗಿ ಮುಗಿಸಿರುವ ಬಿಜೆಪಿ ವರಿಷ್ಠ ನಾಯಕರು ಹೊಸ ವರ್ಷದಿಂದ ಕರ್ನಾಟಕ ವಿಧಾನಸಭೆ ಚುನಾವಣೆಯತ್ತ ತಮ್ಮ ಗಮನಹರಿಸಲು ನಿರ್ಧರಿಸಿದ್ದಾರೆ. ವಾಸ್ತವವಾಗಿ ನಿರ್ಮಲಾ ಸೀತಾರಾಂ ಮತ್ತು ಜೇಟ್ಲಿ ಅವರು ಕಾರ್ಯಕ್ರಮಗಳ ನೆಪದಲ್ಲಿ ಪ್ರತ್ಯೇಕವಾಗಿ ಬೆಂಗಳೂರಿಗೆ ಬರುತ್ತಿದ್ದಾರೆ. ಆ ಸಂದರ್ಭದಲ್ಲಿ ಪಕ್ಷದ ರಾಜ್ಯ ನಾಯಕರೊಂದಿಗೆ ಮಾತುಕತೆ ನಡೆಸಿ ಮುಂದಿನ ಬೆಳವಣಿಗೆಗಳ ಬಗ್ಗೆ ರಣತಂತ್ರ ರೂಪಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಜೇಟಿಟ್ಲಿ ಭೇಟಿಯ ನಂತರ ಬಿಜೆಪಿ ನೂತನ ರಾಜ್ಯಾಧ್ಯಕ್ಷರ ನೇಮಕ, ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡುವ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳುವ ನಿರೀಕ್ಷೆಯೂ ಇದೆ.

ಈ ನಡುವೆ ಬಿಜೆಪಿಯಲ್ಲಿರುವ ಯಡಿಯೂರಪ್ಪ ಬೆಂಬಲಿಗ ಶಾಸಕರ ರಾಜಿನಾಮೆ ಪರ್ವ ಆರಂಭಗೊಂಡಿರುವುದರಿಂದ ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದನ್ನು ಹೇಳಲಾಗದು. ಜ.4ರ ಕೆಜೆಪಿ ಕಾರ್ಯಕಾರಿ ಸಭೆಗೂ ಮುನ್ನ ಅಥವಾ ನಂತರ ಇನ್ನಷ್ಟು ಶಾಸಕರು ರಾಜಿನಾಮೆ ನೀಡುವ ಸಾಧ್ಯತೆಯಿದೆ. ಆದರೆ, ಇದರಿಂದ ಸರ್ಕಾರಕ್ಕೆ ಅಪಾಯವಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಯಡಿಯೂರಪ್ಪ ಅವರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಹೋಗುವುದನ್ನು ತಡೆಗಟ್ಟಲು ಈಗಾಗಲೇ ಬಿಜೆಪಿ ನಾಯಕರು ಮನವೊಲಿಕೆ ಪ್ರಯತ್ನ ಮಾಡುತ್ತಿದ್ದು, ಜೇಟ್ಲಿ ಆಗಮನದ ನಂತರ ಈ ಪ್ರಯತ್ನ ತೀವ್ರಗೊಳ್ಳುವ ಸಂಭವವಿದೆ. ಇದಕ್ಕೆ ಪ್ರತಿಯಾಗಿ ಯಡಿಯೂರಪ್ಪ ಅವರು ಹೆಚ್ಚಿನ ಸಂಖ್ಯೆಯ ಬಿಜೆಪಿ ಶಾಸಕರನ್ನು ತಮ್ಮತ್ತ ಸೆಳೆದುಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ಬಿಜೆಪಿ ಮತ್ತು ಕೆಜೆಪಿ ನಡುವೆ ಜಂಗೀಕುಸ್ತಿಯೇ ನಡೆಯುವ ಸನ್ನಿವೇಶ ನಿರ್ಮಾಣವಾಗಬಹುದಾಗಿದೆ.

15ರೊಳಗೆ ಸರ್ಕಾರ ಪತನ- ಓಲೇಕಾರ್‌

ಈ ನಡುವೆ ಹಾವೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗ ಶಾಸಕ ನೆಹರೂ ಓಲೇಕಾರ್‌, ರಾಜ್ಯ ಬಿಜೆಪಿ ಸರ್ಕಾರ ಜ. 15ರೊಳಗೆ ಪತನವಾಗುವುದು ಖಚಿತ ಎಂದು ಹೇಳಿದ್ದಾರೆ.

ಜ. 4ರಂದು ಬೆಂಗಳೂರಿನಲ್ಲಿ ಕರ್ನಾಟಕ ಜನತಾ ಪಕ್ಷದ ಕೋರ್‌ ಕಮಿಟಿ ಸಭೆ ನಡೆಯಲಿದ್ದು, ಅಂದು ಸರ್ಕಾರದ ಅಳಿವು ಉಳಿವಿನ ಬಗ್ಗೆ ಚರ್ಚೆ ಮಾಡಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಮಂಡಿಸಲು ಹೊರಟಿರುವ ಬಜೆಟ್‌ಗೆ ಕೆಜೆಪಿ ಯಾವುದೇ ಸಹಕಾರ ನೀಡುವುದಿಲ್ಲ. ಬಜೆಟ್‌ ಮಂಡನೆಗೆ ಅವಕಾಶವನ್ನೂ ಕೊಡುವುದಿಲ್ಲ ಎಂದು ಬಲವಾಗಿ ತಿಳಿಸಿದರು.

ಶೆಟ್ಟರ್‌ ಅವರನ್ನು ನಂಬಿ ಯಡಿಯೂರಪ್ಪ ನೇತೃತ್ವದಲ್ಲಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಆದರೆ, ಶೆಟ್ಟರ್‌ ಅವರು ಯಡಿಯೂಪ್ಪ ಬೆಂಬಲಿಗರನ್ನೇ ನಿಗಮ ಮಂಡಳಿ ಸ್ಥಾನಗಳಿಂದ ತೆಗೆದು ಹಾಕಿದ್ದಾರೆ. ಉಪಕಾರ ಮಾಡಿದವರಿಗೇ ಜಗದೀಶ ಶೆಟ್ಟರ ಅಪಕಾರ ಮಾಡುತ್ತಿದ್ದಾರೆ ಎಂದು ಓಲೇಕಾರ ಆರೋಪಿಸಿದರು.

ಜಗದೀಶ ಶೆಟ್ಟರ್‌ ಅವರು ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿರಬೇಕು. ಈ ಸರ್ಕಾರ ಅವಧಿ ಪೂರ್ಣಗೊಳಿಸಬೇಕು ಎಂಬುದು ತಮ್ಮೆಲ್ಲರ ಬಯಕೆಯಾಗಿತ್ತು. ಆದರೆ ಶೆಟ್ಟರ್‌ ಅವರ ಸದ್ಯದ ನಡವಳಿಕೆ ಸರ್ಕಾರ ಬೀಳಲಿ ಎನ್ನುವಂತಿದೆ ಎಂದರು.

ವೆಬ್ದುನಿಯಾವನ್ನು ಓದಿ