ಸಂತೋಷ್ ಲಾಡ್ ರಾಜೀನಾಮೆ: ಕಾಂಗ್ರೆಸ್‌ನಲ್ಲಿ ಬಿತ್ತು ಮೊದಲ ವಿಕೆಟ್

ಶುಕ್ರವಾರ, 22 ನವೆಂಬರ್ 2013 (17:27 IST)
PR
PR
ಬೆಂಗಳೂರು: ಅಕ್ರಮಗಣಿಗಾರಿಕೆಯಲ್ಲಿ ಭಾಗಿಯಾದ ಆರೋಪ ಹೊತ್ತಿದ್ದ ಸಚಿವ ಸಂತೋಷ್ ಲಾಡ್ ಇಂದು ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ತಮ್ಮ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್ ಒಂದು ವಿಕೆಟ್ ಪತನಗೊಂಡಿದೆ. ಸಿಎಂ ನಿವಾಸಕ್ಕೆ ಸಂತೋಷ್ ಲಾಡ್ ಅವರನ್ನು ಕರೆಸಿಕೊಂಡಿದ್ದ ಸಿಎಂ ರಾಜೀನಾಮೆ ಅನಿವಾರ್ಯತೆ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಇದನ್ನು ಮನಗಂಡ ಸಂತೋಷ್ ಲಾಡ್ ರಾಜೀನಾಮಗೆ ಒಪ್ಪಿದ್ದಾರೆ. ನಿನ್ನೆ ಲಾಡ್ ದೆಹಲಿಗೂ ತೆರಳಿದ್ದರು. ನಂತರ ದಿಢೀರನೇ ಸಿಎಂ ನಿವಾಸಕ್ಕೆ ಕಾರಿನಲ್ಲಿ ತೆರಳಿ ಸಿಎಂ ಆದೇಶದ ಪ್ರಕಾರ ರಾಜೀನಾಮೆ ನೀಡಿದ್ದಾರೆಂದು ತಿಳಿದುಬಂದಿದೆ. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೆಂಬ ಕಾರಣಕ್ಕಾಗಿ ಅವರ ರಾಜೀನಾಮೆಗೆ ವ್ಯಾಪಕ ಒತ್ತಡವನ್ನು ಪ್ರತಿಪಕ್ಷಗಳು ಹೇರಿದ್ದವು.

ಒಂದು ಹಂತದಲ್ಲಿ ಸಿಎಂ ಸಿದ್ದರಾಮಯ್ಯ ಲಾಡ್ ಅಕ್ರಮಗಣಿಗಾರಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿದ್ದರು. ಪಕ್ಷ ಮತ್ತು ಸರ್ಕಾರದ ಬದ್ಧತೆ ಬಗ್ಗೆ ಲಾಡ್‌ಗೆ ಸಿಎಂ ಮನವರಿಕೆ ಮಾಡಿಕೊಟ್ಟರೆಂದು ಹೇಳಲಾಗಿದೆ. ಲಾಡ್ ರಾಜೀನಾಮೆಗೆ ಸಾಮಾಜಿಕ ಕಾರ್ಯಕರ್ತರು ಕೂಡ ಸುದೀರ್ಘ ಹೋರಾಟ ನಡೆಸಿದ್ದರು. ಸಮಾಜಪರಿವರ್ತನಾ ಸಂಘದ ಅಧ್ಯಕ್ಷ ಹಿರೇಮಠ್ ಪದೇ ಪದೇ ದಾಖಲೆಗಳನ್ನು ಬಿಡುಗಡೆ ಮಾಡಿ ಲಾಡ್ ರಾಜೀನಾಮೆಗೆ ಆಗ್ರಹಿಸಿದ್ದರು.

ಬಿಜೆಪಿ ಕೂಡ ಲಾಡ್ ರಾಜೀನಾಮೆಗೆ ಒತ್ತಾಯಿಸಿ ದೊಡ್ಡ ಮಟ್ಟದ ಹೋರಾಟ ನಡೆಸಿತ್ತು. ಇವೆಲ್ಲ ಬೆಳವಣಿಗೆಯಿಂದ ಸಿಎಂ ಸಿದ್ದರಾಮಯ್ಯ ಸಂತೋಷ್ ಲಾಡ್ ಅವರನ್ನು ಕರೆಸಿಕೊಂಡು ರಾಜೀನಾಮೆ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ