ಸಕ್ಕರೆ ಕಾರ್ಖಾನೆ ಆಸೆ ತೋರಿಸಿ ರೈತರಿಗೆ ಮಕ್ಮಲ್ ಟೋಪಿ

ಮಂಗಳವಾರ, 6 ಆಗಸ್ಟ್ 2013 (14:16 IST)
PR
PR
ಗಂಗಾವತಿ: 20 ವರ್ಷಗಳಿಂದ ನಿಂತು ಹೋಗಿರುವ ಸಕ್ಕರೆ ಕಾರ್ಖಾನೆಯನ್ನು ಪುನಃ ಆರಂಭಿಸುವುದಾಗಿ ಜನರನ್ನು ನಂಬಿಸಿ, ಕಂಪೆನಿಯ ಷೇರು ಎಂದು ಹೇಳಿ ಜನರಿಂದ ಕೋಟ್ಯಂತರ ರೂ. ಸಂಗ್ರಹಿಸಿದ ಅನಿವಾಸಿ ಭಾರತೀಯ ವಿನೋದ್ ಎಂಬವ ಕೊನೆಗೆ ಜನರಿಗೆ ಮಕ್ಮಲ್ ಟೋಪಿ ಹಾಕಿ ನಾಪತ್ತೆಯಾಗಿರುವ ಘಟನೆ ನಡೆದಿದೆ.

ನನಗೆ ವಿದೇಶದಲ್ಲಿ ಸಕ್ಕರೆ ಕಾರ್ಖಾನೆಗಳಿವೆ. ನಿಂತು ಹೋಗಿರುವ ಸಕ್ಕರೆ ಕಾರ್ಖಾನೆ ಆರಂಭಿಸುತ್ತೇನೆ ಎಂದು ಜನರನ್ನು ನಂಬಿಸಿದ್ದ. ಪ್ರತಿ ಬಾರಿ ಗಂಗಾವತಿಗೆ ಬರುವಾಗ ಹೆಲಿಕಾಪ್ಟರ್‌ನಲ್ಲಿ ಬಂದು ಜನರನ್ನು ಮರಳುಮಾಡುತ್ತಿದ್ದ. ಅವನು ಧರಿಸುತ್ತಿದ್ದ ಠಾಕು,ಠೀಕಾದ ಉಡುಪು, ಮಾತನಾಡುವ ವೈಖರಿ, ಶ್ರೀಮಂತಿಕೆಯ ಸೋಗಿನಿಂದ ರೈತರನ್ನು ಸಂಪೂರ್ಣ ಬೇಸ್ತು ಬೀಳಿಸಿದ್ದ. ಇದರ ಜತೆ ಸ್ಥಳೀಯರು ಕೆಲವರ ಜತೆ ಸೇರಿಕೊಂಡು ಕಾರ್ಖಾನೆ ಆರಂಭಿಸಲು ಹಣಸಂಗ್ರಹದಲ್ಲಿ ತೊಡಗಿದ್ದ.

ಗಂಗಾವತಿಯಲ್ಲಿ ಸಕ್ಕರೆ ಕಾರ್ಖಾನೆಯ ಕನಸು ಕಂಡು ನೂರಾರು ಜನರು ಸಾವಿರಾರು ರೂ. ಷೇರುಗಳನ್ನು ಖರೀಸಿದ್ದರು. ಸುಮಾರು ಮೂರು ನಾಲ್ಕು ಕೋಟಿ ರೂ.ಗಳನ್ನು ಸಂಗ್ರಹಿಸಿದ್ದ ವಿನೋದ್ ಒಂದು ದಿನ ಕೆಲವು ಸ್ಥಳೀಯ ಜನರ ಜತೆ ಏಕಾಏಕಿ ಕಣ್ಮರೆಯಾಗಿದ್ದಾನೆ. ಸಕ್ಕರೆ ಕಾರ್ಖಾನೆಯ ಕನಸು ಕಂಡ ಜನರು ತೀವ್ರ ನಿರಾಶರಾಗಿ ತಲೆ ಮೇಲೆ ಕೈಹೊತ್ತುಕೊಂಡು ಕುಳಿತಿದ್ದಾರೆ.

ವೆಬ್ದುನಿಯಾವನ್ನು ಓದಿ